ADVERTISEMENT

ಕುಷ್ಠ; ಗುಣಪಡಿಸಬಹುದಾದ ರೋಗ

ಜಿಲ್ಲಾಸ್ಪತ್ರೆಯಲ್ಲಿ ನಡೆದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಜಾಥಾ ಕಾರ್ಯಕ್ರಮದಲ್ಲಿ ಬಿ.ಗಣೇಶ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 15:55 IST
Last Updated 30 ಜನವರಿ 2019, 15:55 IST
ಕುಷ್ಠರೋಗ ನಿರ್ಮೂಲನೆಗೆ ಪಣ ತೊಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಿ.ಗಣೇಶ, ಡಾ.ಚೇತನ್, ಡಾ.ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವ್‌ರಾಜ್, ಡಾ.ಕಲ್ಲೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್, ವಾರ್ತಾ ಸಹಾಯಕಿ ಆರ್. ರೂಪಕಲಾ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಮ್ಮ, ಶ್ರೀರಂಗನಾಥ್, ನಾಗರಾಜ್, ಸತೀಶ್, ವಿರುಪಾಕ್ಷಪ್ಪ ಹಾಗೂ ವಾಸು ಪ್ರತಿಜ್ಞೆ ಸ್ವೀಕರಿಸಿದರು
ಕುಷ್ಠರೋಗ ನಿರ್ಮೂಲನೆಗೆ ಪಣ ತೊಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಬಿ.ಗಣೇಶ, ಡಾ.ಚೇತನ್, ಡಾ.ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ, ಆರ್‌ಸಿಎಚ್ ಅಧಿಕಾರಿ ಡಾ.ಕೇಶವ್‌ರಾಜ್, ಡಾ.ಕಲ್ಲೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್, ವಾರ್ತಾ ಸಹಾಯಕಿ ಆರ್. ರೂಪಕಲಾ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಜಯಲಕ್ಷ್ಮಮ್ಮ, ಶ್ರೀರಂಗನಾಥ್, ನಾಗರಾಜ್, ಸತೀಶ್, ವಿರುಪಾಕ್ಷಪ್ಪ ಹಾಗೂ ವಾಸು ಪ್ರತಿಜ್ಞೆ ಸ್ವೀಕರಿಸಿದರು   

ತುಮಕೂರು: ಕುಷ್ಠರೋಗಿಗಳನ್ನು ತಾರತಮ್ಯ ತೋರದೆ, ನೋವಿನಿಂದ ಬಳಲುವ ಅವರನ್ನು ಮುಖ್ಯವಾಹಿನಿಗೆ ತಂದು ಸಾಮಾನ್ಯರೊಂದಿಗೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಗಣೇಶ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.

ಗಾಂಧೀಜಿಯವರು ಹುತಾತ್ಮರಾದ ದಿನದಂದು ಅವರ ಸ್ಮರಣೆಯಲ್ಲಿ ರಾಷ್ಟ್ರದಾದ್ಯಂತ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕುಷ್ಠರೋಗವು ದೇವರ ಶಾಪ ಅಥವಾ ಪಾಪದ ಫಲಗಳಿಂದ ಬರುವುದಿಲ್ಲ. ಗಾಂಧೀಜಿಯವರ ‘ಕುಷ್ಠ ಮುಕ್ತ ದೇಶ’ದ ಕನಸನ್ನು ನಾವೆಲ್ಲಾ ನನಸಾಗಿಸೋಣ ಎಂದು ಹೇಳಿದರಲ್ಲದೆ ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚೇತನ್ ಅವರು, ‘ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 75 ಹೊಸ ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿವೆ. ಕುಷ್ಠರೋಗವು ಮೈಕ್ರೋ ಬ್ಯಾಕ್ಟೀರಿಯಾ ಲೆಫ್ರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ತಿಳಿ, ಬಿಳಿ, ತಾಮ ವರ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಯು ಕುಷ್ಠರೋಗದ ಚಿಹ್ನೆಯಾಗಿರಬಹುದು. ತ್ವರಿತ ಚಿಕಿತ್ಸೆ ಪಡೆಯುವುದರಿಂದ ಈ ರೋಗವನ್ನು ಬಹುವಿಧೌಷಧಿಗಳಿಂದ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ’ ಎಂದರು.

ಅಂಗವೈಕಲ್ಯದ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಈ ಆಂದೋಲನದಲ್ಲಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ. ಅಲ್ಲದೆ ರೋಗದ ಬಗ್ಗೆ ಜನ ಜಾಗೃತಿ ಮೂಡಿಸಲು ಎಲ್ಲ ಗ್ರಾಮಗಳ ಮನೆ-ಮನೆಗೆ ಭೇಟಿ, ಗ್ರಾಮ ಸಭೆ, ಜಾಥಾ, ಶಾಲಾ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮ, ಭಾಷಣ ಸ್ಪರ್ಧೆ, ಗುಂಪು ಸಭೆಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ನರ್ಸಿಂಗ್ ವಿದ್ಯಾರ್ಥಿಗಳಿಂದ ನಡೆದ ಜಾಥಾ ಕಾರ್ಯಕ್ರಮದಲ್ಲಿ ‘ಮಚ್ಚೆಗಳು ಇದ್ದರೆ ಮೈಯಲ್ಲಿ-ಮುಚ್ಚಿಡಬೇಡಿ ಮನದಲ್ಲಿ’, ‘ಕುಷ್ಠರೋಗದ ತ್ವರಿತ ಪತ್ತೆ ಶೀಘ್ರ ಚಿಕಿತ್ಸೆ’, ‘ಬನ್ನಿ ಕುಷ್ಠ ಮುಕ್ತ ದೇಶವನ್ನು ನಿರ್ಮಿಸೋಣ’ ಎಂಬ ಘೋಷ ವಾಕ್ಯಗಳನ್ನು ಪ್ರದರ್ಶಿಸುವ ಮೂಲಕ ಜನಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.