ADVERTISEMENT

ಎಲ್‌ಐಸಿ ಖಾಸಗೀಕರಣ ಸುಳ್ಳು ವದಂತಿ

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ₹72.44 ಕೋಟಿ ಪ್ರೀಮಿಯಂ ಹಣ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 15:33 IST
Last Updated 26 ಫೆಬ್ರುವರಿ 2020, 15:33 IST
ಆಶೀಶ್‍ಕುಮಾರ್
ಆಶೀಶ್‍ಕುಮಾರ್   

ತುಮಕೂರು: ಭಾರತೀಯ ಜೀವ ವಿಮಾ ನಿಗಮ (ಎಲ್‍ಐಸಿ)ವನ್ನು ಖಾಸಗೀಕರಣಗೊಳ್ಳುತ್ತದೆ ಎಂಬುದು ಸುಳ್ಳು ವದಂತಿ. ಇದಕ್ಕೆ ಪಾಲಿಸಿದಾರರು ಕಿವಿಗೊಡಬಾರದು ಎಂದು ಎಲ್‌ಐಸಿ ಬೆಂಗಳೂರು ವಿಭಾಗ–1ರ ಹಿರಿಯ ವಿಭಾಗಾಧಿಕಾರಿ ಆಶೀಶ್‍ಕುಮಾರ್ ಹೇಳಿದರು.

ಕೇಂದ್ರದ ಹಣಕಾಸು ಸಚಿವರು ಎಲ್‍ಐಸಿಯ 100ರಷ್ಟು ಷೇರುಗಳಲ್ಲಿ ಶೇ 10ರಷ್ಟು ಷೇರುಗಳನ್ನು ಆಸಕ್ತರಿಗೆ ಮಾರಾಟ ಮಾಡಲಾಗುತ್ತದೆ ಎಂದು ಹೇಳಿದ್ದಾರಷ್ಟೇ. ಆದರೆ ಖಾಸಗೀಕರಣದ ಬಗ್ಗೆ ಸಚಿವರು ಮಾತನಾಡಿಲ್ಲ. ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಲ್‌ಐಸಿ ಬೆಂಗಳೂರು ವಿಭಾಗ 1ರ ವ್ಯಾಪ್ತಿಯಲ್ಲಿ 20 ಶಾಖೆಗಳು ಮತ್ತು 10 ಉಪಶಾಖೆಗಳಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1,48,703 ಪಾಲಿಸಿಗಳನ್ನು ಪೂರ್ಣಗೊಳಿಸಿ ₹518.10 ಕೋಟಿಯಷ್ಟು ಪ್ರೀಮಿಯಂ ಹಣ ಸಂಗ್ರಹಿಸಲಾಗಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯ ಶಾಖೆಗಳಿಂದ 51,878 ಪಾಲಿಸಿಗಳನ್ನು ಪೂರ್ಣಗೊಳಿಸಿ ₹72.44 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ADVERTISEMENT

ಕಳೆದ ವರ್ಷ ಭಾರತೀಯ ಜೀವ ವಿಮಾ ನಿಗಮ ₹53 ಸಾವಿರ ಕೋಟಿ ಲಾಭ ಗಳಿಸಿದೆ. ಅದರಲ್ಲಿ ಶೇ 95ರಷ್ಟು ಲಾಭವನ್ನು ನಿಗಮದ ಪಾಲಿಸಿದಾರರಿಗೆ ಬೋನಸ್ ರೂಪದಲ್ಲಿ ವಿತರಿಸಲಾಗಿದೆ. ನಿಗಮವು ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಶೇ 5ರಷ್ಟು ಅಂದರೆ ₹2,600 ಕೋಟಿ ಲಾಭದ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಚೆಕ್ ಮೂಲಕ ನೀಡಿದೆ ಎಂದು ತಿಳಿಸಿದರು.

ಈ ಬಾರಿಯ ಆರ್ಥಿಕ ವರ್ಷದಲ್ಲಿ ₹360 ಕೋಟಿಯಷ್ಟು ಗುರಿ ಹೊಂದಲಾಗಿತ್ತು. ಆದರೆ, ಆರ್ಥಿಕ ವರ್ಷ (ಮಾರ್ಚ್‌ 31)ಕ್ಕಿಂತ ಮುನ್ನವೇ ನಾವು ₹518.10 ಕೋಟಿಯಷ್ಟು ಪ್ರಥಮ ಪ್ರೀಮಿಯಂ ಹಣ ಸಂಗ್ರಹಿಸಿದ್ದೇವೆ. ಸುಳ್ಳು ವದಂತಿಗೆ ಕಿವಿಗೊಟ್ಟು ಯಾರೂ ಕೂಡ ಪಾಲಿಸಿ ಹಿಂಪಡೆದಿಲ್ಲ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಬೆಂಗಳೂರು ವಿಭಾಗದ ಮಾರುಕಟ್ಟೆ ಪ್ರಬಂಧಕ ಮುರಳಿ ಮನೋಹರ್, ಮಾರುಕಟ್ಟೆ ವಿಭಾಗದ ಮುರಳೀಧರ್, ತುಮಕೂರಿನ ದಾಳಪ್ಪ ತಳವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.