ಸಾಂದರ್ಭಿಕ ಚಿತ್ರ
ತುಮಕೂರು: ಖರ್ಚಿಗೆ ಹಣ ನೀಡದ ತಾಯಿಯ ಮೇಲೆ ಗುಂಡುಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದ ವಿರೂಪಾಕ್ಷ ಎಂಬಾತನಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ, ₹50 ಸಾವಿರ ದಂಡ ವಿಧಿಸಿದೆ.
ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ಜಯಮ್ಮ ಡೇರಿಗೆ ಹಾಲು ಹಾಕಿ, ಹೂವು ಮಾರಾಟ ಮಾಡಿ ಕೂಡಿಟ್ಟ ಹಣವನ್ನು ಮಗ ವಿರೂಪಾಕ್ಷ ಕೇಳುತ್ತಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆಯಾಗುತ್ತಿತ್ತು. ವಿರೂಪಾಕ್ಷ ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ.
2021ರ ಜ. 15ರಂದು ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಖಾರ ಅರೆಯುವ ಗುಂಡುಕಲ್ಲನ್ನು ಜಯಮ್ಮ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ವಿ.ಎಂ.ಗುರುಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ವೈ.ಎಲ್.ಲಡಖಾನ್ ವಿಚಾರಣೆ ನಡೆಸಿ ಬುಧವಾರ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಆರ್.ಟಿ.ಅರುಣಾ, ಕೆ.ಸಿ.ದೀಪಕ್ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.