ADVERTISEMENT

ಲಿಂಕ್ ಕೆನಾಲ್‌ ಕುಣಿಗಲ್‌ಗೆ ಮಾತ್ರ, ಮಾಗಡಿಗಲ್ಲ-ಹೋರಾಟ ಸಮಿತಿ

ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿ ಪ್ರತಿಭಟನೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:34 IST
Last Updated 2 ಜುಲೈ 2025, 15:34 IST
ಕುಣಿಗಲ್ ಲಿಂಕ್ ಕೆನಾಲ್‌ಗೆ ಆಗ್ರಹಿಸಿ ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು
ಕುಣಿಗಲ್ ಲಿಂಕ್ ಕೆನಾಲ್‌ಗೆ ಆಗ್ರಹಿಸಿ ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಅಧ್ಯಕ್ಷ ಬಿ.ಎನ್. ಜಗದೀಶ್ ಮಾತನಾಡಿದರು   

ಕುಣಿಗಲ್: ತಾಲ್ಲೂಕಿನ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿರುವ ಲಿಂಕ್ ಕೆನಾಲ್ ನಿರ್ಮಾಣಕ್ಕೆ ಜಿಲ್ಲೆ ಮತ್ತು ತಾಲ್ಲೂಕಿನ ರಾಜಕೀಯ ಪಕ್ಷಗಳ ವಿರೋಧವಿಲ್ಲ. ವಿರೋಧವೇನಿದ್ದರೂ ಹೊರ ಜಿಲ್ಲೆ, ಹೊರ ತಾಲ್ಲೂಕಿಗೆ ಜಿಲ್ಲೆಯ ಪಾಲಿನ ನೀರು ಹರಿಸುವುದ್ದಕ್ಕೆ ಮಾತ್ರ ಎಂಬ ಅಭಿಪ್ರಾಯ ಬುಧವಾರ ನಡೆದ ತಾಲ್ಲೂಕು ಸಮಗ್ರ ನೀರಾವರಿ ಯೋಜನೆ ಹೋರಾಟ ಸಮಿತಿ ಪ್ರತಿಭಟನೆಯಲ್ಲಿ ವ್ಯಕ್ತವಾಯಿತು.

ಸಾವಿರಾರು ಪ್ರತಿಭಟನಕಾರರು ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಸಾಗಿ ಸಭೆ ನಡೆಸಿ ತಹಶೀಲ್ದಾರ್ ರಶ್ಮಿಗೆ ಮನವಿ ಸಲ್ಲಿಸಿದರು.

ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಿಲ್ಲೆಗೆ ಹೇಮಾವತಿ ನೀರು ತರುವ ಹೋರಾಟದಲ್ಲಿ ತಾಲ್ಲೂಕಿನ ಜನಪ್ರತಿನಿಧಿಗಳ ಪಾತ್ರ ಹೆಚ್ಚಾಗಿದ್ದರೂ, ತಾಲ್ಲೂಕಿನ ಪಾಲಿನ ನೀರು ಇದುವರೆಗೂ ಬಂದಿಲ್ಲ. ತಾಲ್ಲೂಕಿನ ಪಾಲಿನ 3.3 ಟಿಎಂಸಿ ನೀರು ಸಮರ್ಪಕವಾಗಿ ಬಳಸಿಕೊಳ್ಳಲು ನಾಲೆಗಳ ಸಮಗ್ರ ಅಭಿವೃದ್ಧಿಯಾಗಬೇಕು. ಭಿಕ್ಷೆ ಬೇಡ ಪ್ರಾಮಾಣಿಕ, ನ್ಯಾಯಬದ್ಧ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದು ಹೇಳಿದರು.

ADVERTISEMENT

ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ಶಾಸಕರು ತಾಲ್ಲೂಕಿನ ಮತದಾರನ ಪರವಾಗಿ ಕಾರ್ಯನಿರ್ವಹಿಸದೆ, ಅವರ ಸಂಬಂಧಿಗಳ ಪರ ಕಾರ್ಯನಿರ್ವಹಿಸಿ ಟ್ರಯಲ್‌ ಮೂಲಕ ಮಾಗಡಿಗೆ ನೀರು ಹರಿಸಿದ್ದಾರೆ. ಅಪೂರ್ಣಗೊಂಡಿರುವ ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸದೆ ಹೇಮಾವತಿ ನಾಲಾ ಯೋಜನೆಯ ನೂರಾರು ಕೋಟಿ ಅನುದಾನವನ್ನು ತಮ್ಮ ಹಿಂಬಾಲಕರಿಗೆ ಕಾಮಗಾರಿ ಗುತ್ತಿಗೆ ನೀಡುವುದರ ಮೂಲಕ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಕೆಆರ್‌ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ರಘೂ ಜಾಣಗೆರೆ, ಶಾಸಕರು ತಾಲ್ಲೂಕಿನ ಪಾಲಿನ ನೀರನ್ನು ಹೊರಜಿಲ್ಲೆಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ತಾಲ್ಲೂಕಿನಲ್ಲಿದ್ದ 54 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು 37 ಸಾವಿರ ಹೆಕ್ಟೇರ್‌ಗೆ ಇಳಿಸಿ, ಗೊಂದಲಗಳನ್ನು ನಿವಾರಿಸಲು ವಿಫಲರಾಗಿದ್ದಾರೆ ಎಂದು ದೂರಿದರು.

ಜೆಡಿಎಸ್ ಮುಖಂಡ ಬಿ.ಎನ್ ರವಿ, ಶಾಸಕರು ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ತಾಲ್ಲೂಕಿನಲ್ಲಿ ಬೂತ್‌ಮಟ್ಟದಲ್ಲಿ ಜಾಗೃತಿ ಅಭಿಯಾನ ಮಾಡುತ್ತಿದ್ದಾರೆ. ಯಾವ ಜಾಗೃತಿ ಅಭಿಯಾನ ಮಾಡದೆ, ಸೃಷ್ಟಿಸಿರುವ ಗೊಂದಲಗಳನ್ನು ನಿವಾರಿಸಿ, ಲಿಂಕ್ ಕೆನಾಲ್ ಯೋಜನೆಗೆ ವಿತರಣ ನಾಲೆ 26 ಒಳಪಡುವಂತೆ ಮಾಡಿ, ತಾಲ್ಲೂಕಿನ ಪಾಲಿನ ನೀರನ್ನು ಯಾವುದೇ ಕಾರಣಕ್ಕೂ ಮಾಗಡಿಗೆ ತೆಗೆದುಕೊಂಡು ಹೋಗದಿರುವ ಬಗ್ಗೆ ಸರ್ಕಾರದಿಂದ ಸ್ಪಷ್ಟ ಆದೇಶ ಹೊರಡಿಸಲಿ. ತಾಲ್ಲೂಕಿನಲ್ಲಿ ಅಪೂರ್ಣಗೊಂಡಿರುವ ನಾಲಾ ಕಾಮಗಾರಿ ಪೂರ್ಣಗೊಳಿಸಿ ಎಲ್ಲ ಹೋಬಳಿಗಳಿಗೂ ನೀರು ಹರಿಸಲಿ ಎಂದು ಆಗ್ರಹಿಸಿದರು.

ಅರೆಶಂಕರ ಮಠದ ಸಿದ್ದರಾಮ ಚೈತನ್ಯ ಸ್ವಾಮೀಜಿ, ಅಂಕನಹಳ್ಳಿ ಮಠದ ಸದಾಶಿವ ಶಿವಾಚಾರ್ಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್‌. ಜಗದೀಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್, ವಕೀಲರ ಸಂಘದ ಅಧ್ಯಕ್ಷ ಸಿಂಗಯ್ಯ, ದಲಿತ ಹಕ್ಕುಗಳ ಸಮಿತಿಯ ರಾಜು ವೆಂಕಟಪ್ಪ, ಹೋರಾಟ ಸಮಿತಿಯ ಜಿ.ಕೆ.ನಾಗಣ್ಣ, ಮುಖಂಡರಾದ ಕೆ.ಎಲ್.ಹರೀಶ್, ಮಹಾರಾಷ್ಟ್ರ ಶಿವಣ್ಣ, ತರಿಕೆರೆ ಪ್ರಕಾಶ್ ಹಾಜರಿದ್ದರು.

ಶಾಸಕರ ವಿರುದ್ಧ ಕ್ರಮಕ್ಕೆ ಮನವಿ

 ‘ಲಿಂಕ್ ಕೆನಾಲ್‌ಗಾಗಿ ಆತ್ಮಹತ್ಯೆಗೂ ಸಿದ್ಧ’ ಎಂದು ಶಾಸಕ ಡಾ.ರಂಗನಾಥ ಹೇಳಿರುವ ಬಗ್ಗೆ ಪ್ರತಿಭಟನಾ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಕೆಆರ್‌ಎಸ್ ಪಕ್ಷದ ರಘೂ ಜಾಣಗೆರೆ ‘ಶಾಸಕರು ಪ್ರಚಾರದ ಹಪಾಹಪಿಯಲ್ಲಿ ಭಾವುಕರಾಗಿದ್ದಾರೆ. ಎಲ್ಲಿ ಲಿಂಕ್ ಕೆನಾಲ್ ಸ್ಥಗಿತವಾಗುತ್ತದೊ ತಮ್ಮ ಸಂಬಂಧಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಸಿಟ್ಟಾಗುತ್ತಾರೊ ಎಂದು ಆತಂಕಕ್ಕೊಳಗಾಗಿ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದಾರೆ’ ಎಂದರು.

ರೈತಸಂಘದ ಆನಂದ್ ಪಟೇಲ್ ಮಾತನಾಡಿ ವಿದ್ಯಾವಂತ ಬುದ್ಧಿವಂತ ವೈದ್ಯರೂ ಆಗಿರುವ ಶಾಸಕರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಆತ್ಮಹತ್ಯೆ ಕಾನೂನಿಗೆ ವಿರುದ್ಧ. ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿ ಕ್ರಮ ತೆಗೆದುಕೊಳ್ಳಲಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.