
ಗುಬ್ಬಿ: ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಸರ್ವಿಸ್ ಟ್ರಸ್ಟ್ ಕಚೇರಿ ಉದ್ಘಾಟನೆ, ಉಚಿತ ನೂತನ ಮುಕ್ತಿವಾಹನ ಲೋಕಾರ್ಪಣೆ, ಸಾರ್ವಜನಿಕ ಉದ್ಯಾನ ಅಭಿವೃದ್ಧಿಗೆ ಸಚಿವ ವಿ. ಸೋಮಣ್ಣ ಭೂಮಿಪೂಜೆ ನೆರವೇರಿಸಿದರು.
ಸಚಿವ ವಿ. ಸೋಮಣ್ಣ ಮಾತನಾಡಿ, ತಾಲ್ಲೂಕಿನ ಎಲ್ಲ ರೈಲ್ವೆ ಗೇಟ್‌ಗಳ ಕಾಮಗಾರಿ ಪ್ರಾರಂಭವಾಗಿವೆ. ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಪಟ್ಟಣಕ್ಕೆ ಅಗತ್ಯ ಸೌಕರ್ಯ ಒದಗಿಸಲು ಬದ್ಧ ಎಂದರು.
ಲಯನ್ಸ್ ಸಂಸ್ಥೆ ಜಿಲ್ಲಾ ಉಪ ರಾಜ್ಯಪಾಲ ಡಾ.ಜಿ.ಶಶಿಧರ್ ಗಂಜಿಗಟ್ಟಿ ಮಾತನಾಡಿ, ಸೇವೆಯನ್ನೇ ಗುರಿ ಹಾಕಿಸಿಕೊಂಡು ಲಯನ್ಸ್ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದೆ. ಸಮಾನ ಮನಸ್ಕರು ಲಯನ್ಸ್ ಸಂಸ್ಥೆಯಲ್ಲಿ ಇರುವುದರಿಂದ ಉತ್ತಮ ಸಾಮಾಜಿಕ ಕಾರ್ಯಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.
ಲಯನ್ಸ್ ಕ್ಲಬ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಸ್. ಕುಮಾರಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಲಯನ್ಸ್ ಸಂಸ್ಥೆಯಿಂದ ನಾಲ್ಕು ದಶಕಗಳಿಂದ ನಿರಂತರವಾಗಿ ಸಾಮಾಜಿಕ, ಶೈಕ್ಷಣಿಕ, ಪರಿಸರ, ಆರೋಗ್ಯ ಸೇವೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಶಾಸಕ ಎಸ್.ಆರ್. ಶ್ರೀನಿವಾಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಆರ್. ಅಶೋಕ್ ಕುಮಾರ್, ಪದಾಧಿಕಾರಿಗಳು ಹಾಜರಿದ್ದರು.