ADVERTISEMENT

ಶಿರಾ | ದಿನಸಿ ಅಂಗಡಿಯಲ್ಲಿ ಮದ್ಯ: ದೂರಿತ್ತ ಪರಿಶಿಷ್ಟರಿಗೆ ಇಲ್ಲ ದಿನಸಿ!

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 19:01 IST
Last Updated 28 ಅಕ್ಟೋಬರ್ 2023, 19:01 IST
   

ಶಿರಾ: ದಿನಸಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂದು ದೂರು ನೀಡಿದ ಕಾರಣ ಅಂಗಡಿಗಳಲ್ಲಿ ತಮಗೆ ದಿನಸಿ ಸೇರಿದಂತೆ ದಿನಬಳಕೆ ವಸ್ತು ನೀಡುತ್ತಿಲ್ಲ ಎಂದು ತಾಲ್ಲೂಕಿನ ನಾರಗೊಂಡನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. 

ನಾರಗೊಂಡನಹಳ್ಳಿ ಗ್ರಾಮದ ಎಂಟು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಎರಡು ದಿನದ ಹಿಂದೆ ಗ್ರಾಮದ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದರು.

ಈಗ ಆ ಅಂಗಡಿಗಳ ಮಾಲೀಕರು ‘ನಮ್ಮ ವಿರುದ್ಧ ದೂರು ನೀಡಿದ್ದೀರಾ. ನಿಮಗೆ ಯಾವುದೇ ಸಾಮಗ್ರಿ ನೀಡುವುದಿಲ್ಲ, ಬೇರೆ ಕಡೆ ತೆಗೆದುಕೊಳ್ಳಿ’ ಎಂದು ವಾಪಸ್‌ ಕಳುಹಿಸುತ್ತಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ನಾವು ಯಾರಿಗೂ ಸಾಮಗ್ರಿ ನೀಡುವುದಿಲ್ಲ ಎಂದು ಹೇಳಿಲ್ಲ. ಈಗಾಗಲೇ ಅವರಿಗೆ ಸಾಲವನ್ನೂ ನೀಡಿದ್ದೇವೆ. ಬೆಲೆ ಏರಿಕೆಯಿಂದ ಕೆಲವು ಪದಾರ್ಥ ತರುತ್ತಿಲ್ಲ’ ಎಂದು ಅಂಗಡಿ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಪಟ್ಟನಾಯಕನಹಳ್ಳಿ ಠಾಣೆ ಪೊಲೀಸರು ಶನಿವಾರ ಅಂಗಡಿ ಮಾಲೀಕರು ಮತ್ತು ಪರಿಶಿಷ್ಟ ಮಹಿಳೆಯರನ್ನು ಕರೆಸಿ ಮಾತನಾಡಿದ್ದಾರೆ.

‘ಯಾರಿಗೂ ದಿನಸಿ ನೀಡದೆ ವಾಪಸ್‌ ಕಳುಹಿಸಿಲ್ಲ. ಒಂದು ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ ಪ್ರಕರಣ ದಾಖಲಿಸಿ’ ಎಂದು ಅಂಗಡಿ ಮಾಲೀಕರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಮದ್ಯ ಮಾರಾಟ ಮಾಡುತ್ತಿದ್ದ ನರಸಿಂಹಮೂರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗ್ರಾಮದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಒಮ್ಮತದಿಂದ ಇದ್ದಾರೆ ಎಂದು ಪಿಎಸ್ಐ ಭವಿತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.