ADVERTISEMENT

ಕ್ಷೌರ; ಗ್ರಾಹಕರೇ ಬಟ್ಟೆ ತನ್ನಿ!

ಶೇವಿಂಗ್ ಮಾಡಲು ಕ್ಷೌರಿಕರು ಹಿಂದೇಟು; ಗಂಟೆಗಟ್ಟಲೇ ಕಾಯುವ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 10 ಮೇ 2020, 16:45 IST
Last Updated 10 ಮೇ 2020, 16:45 IST
ತುಮಕೂರು ದೇವನೂರು ರಸ್ತೆಯಲ್ಲಿರುವ ಸಿದ್ಧಗಂಗಾ ಸೆಲೂನ್‌ನಲ್ಲಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಕ್ಷೌರ ಮಾಡುತ್ತಿರುವುದು
ತುಮಕೂರು ದೇವನೂರು ರಸ್ತೆಯಲ್ಲಿರುವ ಸಿದ್ಧಗಂಗಾ ಸೆಲೂನ್‌ನಲ್ಲಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಕ್ಷೌರ ಮಾಡುತ್ತಿರುವುದು   

ತುಮಕೂರು: ನಗರದಲ್ಲಿ ಸೆಲೂನ್, ಕ್ಷೌರಿಕ ಅಂಗಡಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿದ್ದಂತೆ ಕ್ಷೌರಿಕರಿಗೆ ಬೇಡಿಕೆ ಬಂದಿದೆ. ಸಾರ್ವಜನಿಕರು ಗಂಟೆಗಟ್ಟಲೇ ಕಾದು ಕ್ಷೌರ ಮಾಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಜಿಲ್ಲಾಡಳಿತ ಒಂದು ವಾರದ ಹಿಂದೆಯೇ ಜಿಲ್ಲೆಯಲ್ಲಿ ಕ್ಷೌರಿಕ ಅಂಗಡಿ, ಸೆಲೂನ್ ತೆರೆಯಲು ಅವಕಾಶ ನೀಡಿದ್ದರೂ ತುಮಕೂರಿನಲ್ಲಿ ಮಾತ್ರ ಅವಕಾಶ ನೀಡಿರಲಿಲ್ಲ. ಆದರೆ ಈಗ ಅವಕಾಶ ನೀಡಿದೆ.

ಲಾಕ್‌ಡೌನ್‌ ಪರಿಣಾಮ ಕ್ಷೌರಕ್ಕೆ ಅವಕಾಶವಿಲ್ಲದೆ ವಿಪರೀತ ತಲೆಗೂದಲು ಬೆಳೆಸಿಕೊಂಡಿದ್ದ ಸಾರ್ವಜನಿಕರು ಅಂಗಡಿಗಳು ತೆರೆಯುವದನ್ನು ಕಾಯುತ್ತಿದ್ದರು.

ADVERTISEMENT

ನಿಯಮಗಳು ಅಡ್ಡಿ: ಕ್ಷೌರಿಕ ಅಂಗಡಿಗಳು ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ತೆರೆಯಬೇಕು. ಅಂಗಡಿಯಲ್ಲಿ ಒಮ್ಮೆ ಒಬ್ಬ ಗ್ರಾಹಕರಿಗೆ ಮಾತ್ರ ಕ್ಷೌರ ಮಾಡಬೇಕು. ಅಂತರ ಕಾಪಾಡಿಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರ ಇನ್ನಿತರ ಕೋವಿಡ್‌-19 ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ತಿಳಿಸಬೇಕು.

ಕ್ಷೌರಕ್ಕೆ ಬಳಸುವ ಸಾಧನಗಳನ್ನು ರೋಗ ನಿರೋಧಕ ಬಳಸಿ ಶುಚಿಗೊಳಿಸಬೇಕು. ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ಬಳಸಬೇಕು. ಗ್ರಾಹಕರು ಮತ್ತು ಕ್ಷೌರಿಕರು ಕಡ್ಡಾಯವಾಗಿ ಮಾಸ್ಕ್, ಕೈಗವಸು ಧರಿಸಬೇಕು ಎನ್ನುವ ನಿಯಮಗಳನ್ನು ಜಿಲ್ಲಾಡಳಿತ
ವಿಧಿಸಿದೆ. ಈ ನಿಬಂಧನೆಗಳು ಕ್ಷೌರಿಕರಿಗೆ ಈ ಹಿಂದಿನಂತೆ ಕೆಲಸ ನಿರ್ವಹಿಸುವುದಕ್ಕೆ
ಅಡ್ಡಿಯಾಗಿವೆ.

ಇನ್ನೂ ಕೆಲವು ಸೆಲೂನ್‌ಗಳಲ್ಲಿ ಗ್ರಾಹಕರೇ ಮೈ ಮೇಲೆ ಹಾಕಿಕೊಳ್ಳಲು ಬಟ್ಟೆ, ಟವಲ್ ತರಲು ಸೂಚಿಸಲಾಗುತ್ತಿದೆ. ಬಟ್ಟೆ ತಂದವರಿಗೆ ಮಾತ್ರವೇ ಕ್ಷೌರ ಮಾಡಲಾಗುತ್ತಿದೆ! ಕೆಲವೆಡೆ ಅಂಗಡಿಯವರೇ ಬಟ್ಟೆಗಳನ್ನು ಖರೀದಿಸಿದ್ದಾರೆ. ಪ್ರತಿಯೊಬ್ಬರಿಗೂ ಒಂದೊಂದು ಬಟ್ಟೆ ಬಳಸಿದ ನಂತರ ಅದನ್ನು ಸುರಕ್ಷಿತವಾಗಿ ಕೊಂಡೊಯ್ದು ಶುದ್ಧಗೊಳಿಸಲಾಗುತ್ತಿದೆ.

ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕಾಗಿರುವುದರಿಂದ ನಗರದ ಹಲವು ಸೆಲೂನ್‌ಗಳಲ್ಲಿ ತಲೆಗೂದಲು ಕತ್ತರಿಸಲಾಗುತ್ತಿದೆ. ಶೇವಿಂಗ್‌ಗೆ ಕಡಿವಾಣ ಹಾಕಲಾಗಿದೆ. ಶೇವಿಂಗ್‌ಗೆ ಮಾಸ್ಕ್‌ ತೆಗೆಯಬೇಕು. ಈ ಕಾರಣದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.