ADVERTISEMENT

ಡಿ.19ಕ್ಕೆ ಲೋಕ ಅದಾಲತ್

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 2:25 IST
Last Updated 20 ನವೆಂಬರ್ 2020, 2:25 IST

ತುಮಕೂರು: ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಡಿ. 19ರಂದು ‘ಬೃಹತ್ ಲೋಕ ಅದಾಲತ್’ (ಜನತಾ ನ್ಯಾಯಾಲಯ) ನಡೆಸಲಾಗುವುದು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಾರ್ವಜನಿಕರು ತಮ್ಮ ವ್ಯಾಜ್ಯಪೂರ್ವ, ರಾಜಿ ಆಗಬಹುದಾದ ಅಪರಾಧ ಪ್ರಕರಣಗಳು, ಚೆಕ್, ಬ್ಯಾಂಕ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ವೈವಾಹಿಕ/ಕೌಟುಂಬಿಕ ಪ್ರಕರಣಗಳು, ಸಿವಿಲ್ ಪ್ರಕರಣಗಳು ಹಾಗೂ ಇತರ ರಾಜಿ ಆಗಬಹುದಾದ ಪ್ರಕರಣಗಳಲ್ಲಿ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿದಿನ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಅದಾಲತ್‍ಗೆ ಸಂಬಂಧಿಸಿದಂತೆ ಪೂರ್ವಭಾವಿ ಬೈಠಕ್‍ಗಳನ್ನು ನಡೆಸಲಾಗುತ್ತಿದೆ’ ಎಂದರು.

ಜನಸಾಮಾನ್ಯರಿಗೆ ತ್ವರಿತ ಹಾಗೂ ವೆಚ್ಚವಿಲ್ಲದೆ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸುವುದು ಜನತಾ ನ್ಯಾಯಾಲಯದ ಉದ್ದೇಶವಾಗಿದೆ.ನೇರವಾಗಿ ಅದಾಲತ್‍ಗೆ ಬರಲು ಸಾಧ್ಯವಿಲ್ಲದವರು ವಿಡಿಯೊ ಕಾಲ್ ಮೂಲಕವೂ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಜನತಾ ನ್ಯಾಯಾಲಯದಲ್ಲಿ ನೇರವಾಗಿ ಅಥವಾ ವಕೀಲರ ಮೂಲಕ ಭಾಗವಹಿಸಲು ಅವಕಾಶ ಇದೆ. ನ್ಯಾಯಾಲಯಗಳಲ್ಲಿ ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು. ಇಬ್ಬರಿಗೂ ಒಪ್ಪಿಗೆ ಆಗುವಂತೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದ ಸುಖಾಂತ್ಯಗೊಳ್ಳುತ್ತದೆ. ನ್ಯಾಯಾಲಯದಲ್ಲಿ ದಾಖಲಾಗದೆ ಇರುವ ಪ್ರಕರಣ (ವ್ಯಾಜ್ಯ ಪೂರ್ವ ಪ್ರಕರಣಗಳು)ಗಳನ್ನು ಸಹ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು
ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ. ಅನಿಲ್ ಗೋಷ್ಠಿಯಲ್ಲಿ ಇದ್ದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.