ತುಮಕೂರು: ಮೂರು ದಿನಗಳ ಹಿಂದೆ ಚೀನಾ ಪ್ರವಾಸಕ್ಕೆ ತೆರಳಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿರುವುದು ದಾಳಿ ಸಮಯದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿಯ ಅಶೋಕ ನಗರದಲ್ಲಿರುವ ರಾಜಶೇಖರ್ ಮನೆಯಲ್ಲಿ ಅವರ ಪತ್ನಿ ಸಮ್ಮುಖದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಯಿತು. ನಿರ್ಮಿತಿ ಕೇಂದ್ರದ ಕಚೇರಿ, ಎಸ್‌ಐಟಿ ಸಮೀಪದಲ್ಲಿರುವ ಸಹೋದರನ ಮನೆ, ಸಹೋದರಿ ಮನೆ, ಬೆಂಗಳೂರಿನ ಒಂದು ಕಡೆ ಸೇರಿದಂತೆ ಏಕಕಾಲಕ್ಕೆ ಒಂಬತ್ತು ಕಡೆಗಳಲ್ಲಿ ದಾಳಿ ನಡೆದಿತ್ತು. ರಾತ್ರಿ ಸಹ ಪರಿಶೀಲನೆ ಮುಂದುವರಿದಿದ್ದು, ತಪಾಸಣೆ ಪೂರ್ಣಗೊಂಡ ನಂತರವಷ್ಟೇ ಮತ್ತಷ್ಟು ವಿವರಗಳು ಲಭ್ಯವಾಗಲಿವೆ.
ಬೆಂಗಳೂರು, ತುಮಕೂರು ಸೇರಿದಂತೆ ವಿವಿಧೆಡೆಗಳಲ್ಲಿ 12 ನಿವೇಶನ, ಬೆಂಗಳೂರಿನ ಕೆಂಗೇರಿ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಐಷಾರಾಮಿ ಫ್ಲ್ಯಾಟ್, ತುಮಕೂರಿನ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎರಡು ಕಾರ್ಖಾನೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಾಲ್ಕು ಎಕರೆ ಜಮೀನು ಸೇರಿದಂತೆ ಅಕ್ರಮವಾಗಿ ಸಂಪಾದಿಸಿರುವ ಅಪಾರ ಪ್ರಮಾಣದ ಆಸ್ತಿಯ ದಾಖಲೆ ಪತ್ತೆಯಾಗಿವೆ. ಪತ್ನಿ, ಸಂಬಂಧಿಕರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಿಸಿರುವುದು ಗೊತ್ತಾಗಿದೆ.
2023–24ರಲ್ಲಿ ಹಳೆ ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ₹2 ಕೋಟಿಗೂ ಅಧಿಕ ಮೊತ್ತ ಪಡೆದುಕೊಂಡಿರುವುದು, 2024–25ರಲ್ಲೂ ಹಳೆ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ₹3 ಕೋಟಿಗೂ ಅಧಿಕ ಮೊತ್ತ ಡ್ರಾ ಮಾಡಿಕೊಂಡಿದ್ದಾರೆ. ಸಂಬಂಧಿಕರ ಹೆಸರಿನಲ್ಲೂ ನಕಲಿ ಬಿಲ್ ಸೃಷ್ಟಿಸಿ ವಂಚಿಸಿರುವುದು ತಪಾಸಣೆ ಸಮಯದಲ್ಲಿ ಗೊತ್ತಾಗಿದೆ.
ಇನ್ನಷ್ಟು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಕ್ರಮಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ. ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆದ ಬಳಿಕವಷ್ಟೇ ಅಕ್ರಮಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ರಾಜಶೇಖರ್ ವಿರುದ್ಧ ಸಾಕಷ್ಟು ದೂರು ಕೇಳಿ ಬಂದಿದ್ದವು. ಅಕ್ರಮಗಳ ಸಾಕಷ್ಟು ದೂರು ಬಂದಿದ್ದರೂ ಈವರೆಗೂ ಯಾರೊಬ್ಬರೂ ತನಿಖೆಗೆ ಮುಂದಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.