ADVERTISEMENT

ಸಿಐಟಿಯು ಸಭೆ: ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:50 IST
Last Updated 14 ಸೆಪ್ಟೆಂಬರ್ 2025, 5:50 IST
ಮಧುಗಿರಿಯಲ್ಲಿ ಶನಿವಾರ ಸಿಐಟಿಯು ಜಿಲ್ಲಾ ಸಮ್ಮೇಳನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಐಟಿಯು ಪದಾಧಿಕಾರಿಗಳು ಸರ್ಕಾರಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯಿತು
ಮಧುಗಿರಿಯಲ್ಲಿ ಶನಿವಾರ ಸಿಐಟಿಯು ಜಿಲ್ಲಾ ಸಮ್ಮೇಳನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಐಟಿಯು ಪದಾಧಿಕಾರಿಗಳು ಸರ್ಕಾರಗಳ ವಿರುದ್ಧ ಪ್ರತಿಭಟನಾ ಮೆರವಣಿಗೆ ನಡೆಯಿತು   

ಮಧುಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು, ಬಡವರು, ಕೃಷಿಕರು, ಕೂಲಿ ಕಾರ್ಮಿಕರ ಮತ್ತು ಅಸಂಘಟಿತ ವಲಯಗಳಲ್ಲಿ ದುಡಿಯುವ ಶ್ರಮಜೀವಿಗಳ ಬದುಕಿನ ಜೊತೆ ಚಲ್ಲಾಟವಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಸಿಐಟಿಯು ಮತ್ತು ಅಂಗನವಾಡಿ ನೌಕರರ ಸಂಘದ ರಾಜ್ಯ ಘಟದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ತಿಳಿಸಿದರು.

ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಶನಿವಾರ ನಡೆದ ಸಿಐಟಿಯು ಜಿಲ್ಲಾ ಸಮ್ಮೇಳನದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಬಂಡವಾಳ ಶಾಹಿಗಳು ಕಾರ್ಮಿಕರ ಅವಶ್ಯಕತೆ ಇ್ಲಲವೆಂದು ನಿರಾಕರಿಸುತ್ತಿದ್ದು, ಸ್ವಯಂಘೋಷಿತ ಪ್ರಭುಗಳಾಗಲು ಹೊರಟಿದ್ದಾರೆ. ಸರ್ಕಾರಗಳು ತಮ್ಮ ಕಾರ್ಯ ಯಶಸ್ವಿಗೊಳಿಸಲು ಖಾಯಂ ಹೊರಗುತ್ತಿಗೆ ನೌಕರರನ್ನು ಬಳಸಿಕೊಳ್ಳುತ್ತಿದ್ದು, ಅವರ ಬದುಕಿನ ಸೇವಾ ಭದ್ರತೆಗೆ ಗಮನ ಹರಿಸದೆ ದುಡಿಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ADVERTISEMENT

ಬಿಸಿಯೂಟ ನೌಕರರಿಗೆ ಐದು ಸಾವಿರ ವೇತನ ನೀಡುತ್ತಿಲ್ಲ. 50 ವರ್ಷ ದುಡಿದರೂ ಅಂಗನವಾಡಿ ನೌಕರರಿಗೆ 13 ಸಾವಿರ ವೇತನ ದಾಟಿಲ್ಲ. ಗ್ರಾಚ್ಯುಟಿ ಇ್ಲಲ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಕೈಚಲ್ಲಿವೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಮಾತನಾಡಿ, ಸರ್ಕಾರಗಳು ನಮ್ಮ ಬೇಡಿಕೆ ಕೇಳಿಸಿಕೊಳ್ಳದೆ ಕಿವುಡತನ ತೋರುತ್ತಿವೆ. ಇದಕ್ಕಾಗಿ ಒಗ್ಗಟ್ಟು ಮತ್ತು ಐಕ್ಯತೆ ಬೇಕು ಎಂದರು.

ಬೆಂಗಳೂರು ನಗರಗಳಲ್ಲಿ ದೊಡ್ಡ ಕೈಗಾರಿಕೆಗಳು ಕೇಂದ್ರಿಕೃತವಾಗುತ್ತಿವೆ. ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲ್ಲೂಕುಗಳು ಅತ್ಯಂತ ಬರಪೀಡಿತ ಪ್ರದೇಶಗಳಾಗಿವೆ. ಇಂತಹ ಕಡೆ ಕೈಗಾರಿಕೆಗಳು ಪ್ರಾರಂಭವಾದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕಮಲ ಮಾತನಾಡಿ, ದುಡಿಯುವ ಜನರಿಗೆ ಬದುಕಲು ಯೋಗ್ಯ ಕೂಲಿ, ವಸತಿ, ಪಿಂಚಣಿ ನೀಡಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಕಾಯಂ ಮಾಡಬೇಕು. ಅಸಂಘಟಿತ ಕಾರ್ಮಿಕರ ಸಮಗ್ರ ಸಾಮಾಜಿಕ ಭದ್ರತೆ, ಬರಪೀಡಿತ-ಒಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಮಧುಗಿರಿ ಉಪ ವಿಭಾಗಕ್ಕೆ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಈ ಪ್ರದೇಶಗಳಲ್ಲಿ ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ದೊರಕಿಸುವ ಜೊತೆಗೆ ಮಧುಗಿರಿ ಏಕಶಿಲಾ ಬೆಟ್ಟ ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ ಸಿಐಟಿಯು ಮಹಿಳೆಯರು ಖಾಸಗಿ ಬಸ್ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡು ಸರ್ಕಾರಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮೆರವಣಿಗೆ ನಡೆಸಿದರು

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಶಂಕರಪ್ಪ, ಜಿಲ್ಲಾ ಖಜಾಂಚಿ ಲೋಕೇಶ್‌, ಸಿಐಟಿಯು ಕಾರ್ಯಾಧ್ಯಕ್ಷೆ ಪಾರ್ವತಮ್ಮ, ಗೌರವಾಧ್ಯಕ್ಷ ಕೃಷ್ಣಪ್ಪ, ಸಿಐಟಿಯು ಪದಾಧಿಕಾರಿಗಳಾದ ಬಿ.ಉಮೇಶ್, ಷಣ್ಮುಗಪ್ಪ, ಗುಲ್ಜಾರ್, ರಂಗಧಾಮಯ್ಯ, ಅನುಸೂಯ, ಸುಬ್ರಹ್ಮಣ್ಯ, ರವಿ ಹಾಗೂ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು, ಅಂಗನವಾಡಿ, ಬಿಸಿಯೂಟ ಹಾಗೂ ಇತರೆ ವಲಯದ ಮಹಿಳೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.