
ಮಧುಗಿರಿ: ಪಟ್ಟಣದಲ್ಲಿ ಸರ್ಕಾರಿ ಕಚೇರಿ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುವಂತಾಗಿದೆ. ಕೆಲವು ಸರ್ಕಾರಿ ಕಚೇರಿಗಳನ್ನು ಹುಡುಕುವುದೇ ಸವಾಲಾಗಿದೆ.
ಪಟ್ಟಣದ ಕೆಲ ಸರ್ಕಾರಿ ಇಲಾಖೆಗಳು ಸ್ವಂತ ಕಟ್ಟಡಗಳನ್ನು ಮಾಡಿಕೊಳ್ಳದೇ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳನ್ನು ಹುಡುಕುವ ಜೊತೆಗೆ ಕಚೇರಿಗಳನ್ನು ಹುಡುಕುವ ಸ್ಥಿತಿ ಎದುರಾಗಿದೆ. ಈ ವರ್ಷ ಕಚೇರಿಗಳು ಒಂದಡೆ ಕಾರ್ಯನಿರ್ವಹಿಸಿದ್ದರೆ, ಮುಂದಿನ ವರ್ಷ ಮತ್ತೊಂದು ಕಡೆ ಕಾರ್ಯನಿರ್ವಹಿಸುತ್ತವೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ, ತೂಕ ಮತ್ತು ಅಳತೆ, ಸಮಾಜ ಕಲ್ಯಾಣ ಇಲಾಖೆ, ವಾಣಿಜ್ಯ ಇಲಾಖೆ, ಕರ್ನಾಟಕ ಭೂಸೇನಾ ನಿಗಮ, ಅಬಕಾರಿ ಇಲಾಖೆ, ನಮ್ಮ ಕ್ಲಿನಿಕ್, ಪಟ್ಟಣದ ವ್ಯಾಪ್ತಿಯ 21 ಅಂಗನವಾಡಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 23 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.
ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಮರ್ಪಕ ಕೊಠಡಿ ವ್ಯವಸ್ಥೆ ಇಲ್ಲದೆ ಅಧಿಕಾರಿಗಳಿಗೂ ಹಾಗೂ ಸಾರ್ವಜನಿಕರಿಗೂ ತೀವ್ರ ತೊಂದರೆಯಾಗುತ್ತಿದೆ.
ಪ್ರತಿನಿತ್ಯ ಪಡಿತರ ಚೀಟಿ, ಹೆಸರು ತಿದ್ದುಪಡಿ, ಹೆಸರು ಸೇರ್ಪಡೆ ಸೇರಿದಂತೆ ಹಲವು ಸಮಸ್ಯೆ ನಿವಾರಣೆಗಾಗಿ ಕಚೇರಿಗೆ ಬಂದರೆ ಸಾರ್ವಜನಿಕರಿಗೆ ಕುಳಿತುಕೊಳ್ಳುವುದಕ್ಕೆ ಹಾಗೂ ನಿಲ್ಲುವುದಕ್ಕೂ ಸ್ಥಳವೇ ಇಲ್ಲದಂತಾಗಿದೆ. ಈ ಸಮಸ್ಯೆಯಿಂದಾಗಿ ಮಹಿಳೆಯರು ಹಾಗೂ ವೃದ್ಧರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದರೂ ಅಧಿಕಾರಿಗಳು ಸಮಸ್ಯೆ ತಿಳಿಗೊಳಿಸುವ ಪ್ರಯತ್ನ ಮಾಡದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ತಾಲ್ಲೂಕು ಕಚೇರಿಯಲ್ಲಿರುವ ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ ಆಸ್ತಿ ನೋಂದಣಿ ಮಾಡಿಸಲು ನಿತ್ಯ ತಾಲ್ಲೂಕು ಹಾಗೂ ವಿವಿಧ ಊರುಗಳಿಂದ ನೂರಾರು ಮಂದಿ ಬರುತ್ತಾರೆ. ಆದರೆ ಅವರಿಗೆ ಕುಳಿತುಕೊಳ್ಳಲು ಸಮರ್ಪಕ ಸ್ಥಳದ ವ್ಯವಸ್ಥೆ ಇಲ್ಲದೆ ತೊಂದರೆಯಾಗುತ್ತಿದೆ. ಅಂಗವಿಕಲರು ಹಾಗೂ ವೃದ್ಧರು ಬಂದರೆ ಅವರ ಪಾಡು ಹೇಳತೀರದಾಗಿದೆ.
ಪಟ್ಟಣದ ಆಯ್ದ ಭಾಗಗಳಲ್ಲಿರುವ ಸರ್ಕಾರಿ ಜಾಗಗಳನ್ನು ಖಾಸಗಿ ಅವರಿಗೆ ಕೆಲ ಅಧಿಕಾರಿಗಳು ಈ ಹಿಂದೆ ಮಾಡಿಕೊಟ್ಟಿರುವುದರಿಂದ ಹಲವು ಸರ್ಕಾರಿ ಕಚೇರಿಗಳಿಗೆ ಜಾಗವೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.