ADVERTISEMENT

ಮಧುಗಿರಿ | ಕಾಲೇಜು ಕಟ್ಟಡ ಶಿಥಿಲ: ಆತಂಕದಲ್ಲೇ ಕಲಿಕೆ

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೂಲಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 3:08 IST
Last Updated 7 ಅಕ್ಟೋಬರ್ 2025, 3:08 IST
ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ
ಮಧುಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ   

ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯ ಕೊರತೆ ಮತ್ತು ನಿರ್ವಹಣೆ ಕೊರತೆಯಿಂದ ಅಧೋಗತಿಗೆ ತಲುಪಿದೆ. ಸೋರುವ ಕೊಠಡಿಗಳಲ್ಲಿ ಪಾಠ ಕೇಳುವ ಸ್ಥಿತಿಗೆ ವಿದ್ಯಾರ್ಥಿಗಳು ತಲುಪಿದ್ದಾರೆ. 

ತಾಲ್ಲೂಕಿನ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲೆಂಬ ಉದ್ದೇಶದಿಂದ 1997ರಲ್ಲಿ ಈ ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗಿತ್ತು. ಆದರೆ, ಕಾಲಾಂತರದಲ್ಲಿ ಕಟ್ಟಡದ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಗೋಡೆಗಳಿಂದ ನೀರು ಜಿನುಗುತ್ತದೆ ಮತ್ತು ಬೇಸಿಗೆಯಲ್ಲಿ ಮಣ್ಣು ಉದುರುತ್ತದೆ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ತೊಂದರೆಯಾಗುತ್ತಿದೆಯೆಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಾಲೇಜಿನ ಕಟ್ಟಡ ಸುಣ್ಣ ಮತ್ತು ಬಣ್ಣ ಬಳಿಯಲಾಗಿ ಬಹು ವರ್ಷಗಳಾಗಿವೆ. ಕಿಟಕಿಗಳ ಗಾಜುಗಳು ಹಾಳಾಗಿ, ಮಳೆ ನೀರು ಒಳ ಹೋಗುತ್ತಿದೆ. ಈ ಸಮಸ್ಯೆಗಳನ್ನು ಉಪನ್ಯಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ADVERTISEMENT

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 22 ಕೊಠಡಿಗಳಿವೆ. ಅವುಗಳಲ್ಲಿ 9 ಕೊಠಡಿಗಳು ಬಳಕೆಗೆ ಅನುಪಯುಕ್ತವಾಗಿವೆ. ಕಾಲೇಜಿನಲ್ಲಿ ಮೂರು ಶೌಚಾಲಯಗಳಿವೆ. ಒಂದನ್ನು ಉಪನ್ಯಾಸಕರು ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶೌಚಾಲಯಗಳು ಸಂಪೂರ್ಣವಾಗಿ ಹಾಳಾಗಿ, ನಿರ್ವಹಣೆಯಿಲ್ಲದೆ ಕೊಳೆಯುತ್ತಿವೆ. ಶೌಚಾಲಯ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳು ಹೊರಗಡೆ ಅಲೆಯಬೇಕಾಗುತ್ತಿದೆ.

ಕಳೆದ ವರ್ಷ ಕಾಲೇಜಿಗೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ಮಂಜೂರಾಗಿದೆ. ಆದರೆ, ಎರಡು ವರ್ಷಗಳ ನಂತರವೂ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಇಲ್ಲದೆ, 86 ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆ ಕಂಪ್ಯೂಟರ್ ಲ್ಯಾಬ್‌ಗೆ ತೆರಳಬೇಕಾಗುತ್ತಿದೆ.

ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಒಟ್ಟು 23 ಹುದ್ದೆಗಳು ಮಂಜೂರಾಗಿವೆ. ಆದರೆ, 10 ಹುದ್ದೆಗಳು ಖಾಲಿ ಇವೆ. ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಜೀವಶಾಸ್ತ್ರ ಮತ್ತು ಕನ್ನಡ ವಿಷಯಗಳಿಗೆ ಕಾಯಂ ಉಪನ್ಯಾಸಕರು ಇಲ್ಲದೆ, ಅತಿಥಿ ಉಪನ್ಯಾಸಕರ ಮೂಲಕ ವಿದ್ಯಾಭ್ಯಾಸ ನಡೆಸಲಾಗುತ್ತಿದೆ.

ಗಬ್ಬು ನಾರುತ್ತಿರುವ ಶೌಚಾಲಯ
ಶಿಥಿಲಗೊಂಡಿರುವ ಮೇಲ್ಛಾವಣಿ
ಕೆ.ಎನ್.ರಾಜಣ್ಣ ಶಾಸಕ
ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಉಪನ್ಯಾಸಕ ಕೊರತೆ ನಿವಾರಿಸಬೇಕು
- ಮೇಘನಾ ವಿದ್ಯಾರ್ಥಿನಿ
ಕಾಲೇಜಿನ ಕೊಠಡಿಯಲ್ಲಿ ಪಾಠ ಕೇಳುವಾಗ ಮೇಲ್ಛಾವಣಿಯಿಂದ ಮಣ್ಣು ಉದುರುತ್ತಿದೆ. ಈ ಮಣ್ಣು ಕಣ್ಣಿಗೆ ಬಿದ್ದು ನೋವಾಗಿದೆ.
ರವೀಶ್ ವಿದ್ಯಾರ್ಥಿ
ಕಾಲೇಜಿಗೆ ಶಾಸಕ ಕೆ.ಎನ್.ರಾಜಣ್ಣ ಭೇಟಿ ನೀಡಿದ್ದಾಗ ಕೊಠಡಿ ದುರಸ್ತಿ ಹಾಗೂ ಮೂಲಭೂತ ಸಮಸ್ಯೆ ಬಗ್ಗೆ ಗಮನಕ್ಕೆ ತರಲಾಗಿದೆ
ವೇದಮೂರ್ತಿ ಪ್ರಾಂಶುಪಾಲ ಸರ್ಕಾರಿ ಪದವಿಪೂರ್ವ ಕಾಲೇಜು

ಸರ್ಕಾರಕ್ಕೆ ಪ್ರಸ್ತಾವ: ಶಾಸಕ  ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ್ದೇನೆ. ಕಾಲೇಜಿನ ಕೊಠಡಿ ಶೌಚಾಲಯ ಬಣ್ಣ ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ₹60ಲಕ್ಷ ಮಂಜೂರು ಮಾಡುವಂತೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಕೆ.ಎನ್.ರಾಜಣ್ಣ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.