ಮಧುಗಿರಿ: ಊರಿನ ಒಳಿತಿಗಾಗಿ ಪೂರ್ವಿಕರು ಆಚರಿಸಿಕೊಂಡು ಬಂದಿದ್ದ, ಹೊರಬೀಡು ವಿಶಿಷ್ಟ ಆಚರಣೆಯನ್ನು ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯದ ಗ್ರಾಮಸ್ಥರು ಮಂಗಳವಾರ ಆಚರಿಸಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮುದ್ದಯ್ಯನಪಾಳ್ಯ ಗ್ರಾಮದಲ್ಲಿ 130ಕ್ಕೂ ಹೆಚ್ಚು ಮನೆಗಳಿದ್ದು, ಎಲ್ಲ ವರ್ಗದ ಜನರು ಮೂರು ವರ್ಷಕೊಮ್ಮೆ ನಡೆಯುವ ಹೊರಬೀಡು ಸಂಪ್ರದಾಯವನ್ನು ಚಾಚು ತಪ್ಪದೆ ಪಾಲಿಸುತ್ತಾ ಬಂದಿದ್ದಾರೆ.
ಹೊರಬೀಡು ಆಚರಣೆಗಾಗಿ ಮಂಗಳವಾರ ಮುಂಜಾನೆ ಐದು ಗಂಟೆಗೆ ದನ-ಕರು, ಕುರಿಗಳೊಂದಿಗೆ ಇಡೀ ಕುಟುಂಬದವರು ಮನೆಗಳಿಗೆ ಬೀಗ ಹಾಕಿ ಗ್ರಾಮಕ್ಕೆ ಹೋಗುವ ಬರುವ ದಾರಿಗಳನ್ನು ಮುಚ್ಚುತ್ತಾರೆ. ಹೀಗೆ ಮುಚ್ಚಿರುವ ದಾರಿಗಳಲ್ಲಿ ಯಾರು ಗ್ರಾಮವನ್ನು ಪ್ರವೇಶಿಸದಂತೆ ಕಾವಲುಗಾರರನ್ನು ನೇಮಿಸಿದ್ದರು.
ಮರಗಳ ಆಶ್ರಯದ ಮೊರೆ ಹೊಕ್ಕ ಗ್ರಾಮಸ್ಥರು ಸೂರ್ಯಾಸ್ತದ ತನಕ ಗ್ರಾಮದತ್ತ ಬರಲಿಲ್ಲ. ಈ ಆಚರಣೆಗೆ ನೆಂಟರು-ಮಿತ್ರರು ಭಾಗವಹಿಸಿದ್ದರು. ಗ್ರಾಮದ ಹೊರಭಾಗದ ಜಮೀನುಗಳಲ್ಲಿರುವ ಗ್ರಾಮಸ್ಥರು ತಮಗೆ ಇಷ್ಟವಾಗುವಂತಹ ಸಸ್ಯಹಾರ, ಮಾಂಸಹಾರ, ವಿವಿಧ ಭಕ್ಷ್ಯ ಭೋಜನಗಳನ್ನು ಕುಟುಂಬದ ಜೊತೆಗೂಡಿ ಹೊರಬೀಡಿನ ಸವಿಯನ್ನು ಸವಿದರು.
ಸಂಜೆಯಾದ ಮೇಲೆ ಗ್ರಾಮದ ಪ್ರಮುಖ ರಸ್ತೆಗೆ ಹಾಕಿದ್ದ ಮುಳ್ಳಿನ ಬೇಲಿಯನ್ನು ಹೊರತೆಗೆದು ವಿವಿಧ ಪೂಜಾ ಕಾರ್ಯಗಳನ್ನು ಮಾಡಿ ಪ್ರಮುಖ ರಸ್ತೆಗಳಿಗೆ ಶಾಂತಿ ನೆರವೇರಿಸಿ, ಗ್ರಾಮದ ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಮನೆಗಳಿಗೆ ತೆರಳಿದರು.
ಹಲವು ವರ್ಷಗಳಿಂದ ಪ್ರತಿ ಮೂರು ವರ್ಷಕೊಮ್ಮೆ ಗ್ರಾಮದಲ್ಲಿ ಹೊರಬೀಡು ಆಚರಣೆ ಗ್ರಾಮಸ್ಥೆರಲ್ಲಾ ಸೇರಿಕೊಂಡು ಮಾಡುತ್ತಿದ್ದೇವೆ ಎಂದು ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.