ಮಧುಗಿರಿ: ಲಂಚಕ್ಕೆ ಬೇಡಿಕೆ– ಲೋಕಾಯುಕ್ತ ಬಲೆಗೆ ಕೋಡ್ಲಾಪುರ ಪಿಡಿಒ
ಕೊಡಿಗೇನಹಳ್ಳಿ (ಮಧುಗಿರಿ ತಾಲ್ಲೂಕು): ಆಸ್ತಿ ಖಾತೆ ಮಾಡಿಕೊಡಲು ಲಂಚ ತೆಗೆದುಕೊಳ್ಳುವ ಸಮಯದಲ್ಲಿ ಪುರವರ ಹೋಬಳಿಯ ಕೋಡ್ಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಪುಂಡಲೀಕ ಬೊಮ್ಮಗೊಂಡ ಅವರು ಲೋಕಾಯುಕ್ತ ಪೊಲೀಸರಿಗೆ ಮಂಗಳವಾರ ಸಿಕ್ಕಿ ಬಿದ್ದಿದ್ದಾರೆ.
ವೀರನಾಗೇನಹಳ್ಳಿ ಗ್ರಾಮದ ಆನಂದ್ ಅವರು ಮನೆಯ ಇ–ಖಾತೆಗಾಗಿ ಅರ್ಜಿ ಸಲ್ಲಿಸಿದ್ದರು. ಖಾತೆ ಮಾಡಿಕೊಡಲು ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿಡಿಒ ಪುಂಡಲೀಕ ಬೊಮ್ಮಗೊಂಡ ಅವರಿಗೆ ₹6 ಸಾವಿರ ನೀಡುವಾಗ ಲೋಕಾಯುಕ್ತ ಎಸ್ಪಿ ಲಕ್ಷ್ಮಿನಾರಾಯಣ ನೇತೃತ್ವದ ತಂಡ ದಾಳಿ ನಡೆಸಿದೆ.
ಮಂಗಳವಾರ ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 4 ಗಂಟೆ ತನಿಖೆ ನಡೆಸಿ ದಾಖಲೆ ಪರಿಶೀಲಿಸಿತು. ದಾಳಿಯಲ್ಲಿ ಡಿವೈಎಸ್‌ಪಿ ಕೆ.ವಿ.ಸಂತೋಷ್, ಇನ್‌ಸ್ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ರಾಜು, ಮಹಮದ್ ಸಲೀಂ, ಸುರೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.