ADVERTISEMENT

ಸರ್ಕಾರಿ ಶಾಲೆಗಳ ವಿಲೀನ ಕಳವಳ: ಮಧುಗಿರಿ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:38 IST
Last Updated 25 ಡಿಸೆಂಬರ್ 2025, 7:38 IST
ಮಧುಗಿರಿ ಕನ್ನಡ ಭವನದಲ್ಲಿ 7ನೇ ಸಾಹಿತ್ಯ ಸಮ್ಮೇಳನವನ್ನು ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು
ಮಧುಗಿರಿ ಕನ್ನಡ ಭವನದಲ್ಲಿ 7ನೇ ಸಾಹಿತ್ಯ ಸಮ್ಮೇಳನವನ್ನು ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು   

ಮಧುಗಿರಿ: ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ವಿಷಯವಾರು ಶಿಕ್ಷಕರನ್ನು ನೇಮಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಪಿ.ನಟರಾಜ್ ಒತ್ತಾಯಿಸಿದರು.

ಕೆಪಿಎಸ್ ಶಾಲೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾರಂಭಿಸಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಇದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ದಿನದಂದ ದಿನಕ್ಕೆ ಕುಸಿಯುತ್ತಿದೆ ಎಂದರು.

ಕನ್ನಡ ಶಿಕ್ಷಣ ಕಣ್ಮುಂದೆಯೇ ಮರೆಯಾಗುತ್ತಿದ್ದರೂ ಯಾವ ಕನ್ನಡಿಗರು ಈ ಬಗ್ಗೆ ಮಾತನಾಡುತ್ತಿಲ್ಲ, ಪ್ರತಿಭಟಿಸುವ ಜಿದ್ದು ಹುಟ್ಟುತ್ತಿಲ್ಲ. ಬಹುತೇಕರು ಇಂಗ್ಲಿಷ್‌ ವಾದಿಗಳಾಗಿ ಬದಲಾಗಿಬಿಟ್ಟಿದ್ದಾರೆ. ಈಗಲಾದರೂ ಕನ್ನಡ ನಾಡು, ನುಡಿ, ಜಲ ವಿಚಾರದಲ್ಲಿ ಎಲ್ಲರೂ ಧ್ವನಿ ಎತ್ತಬೇಕು ಎಂದರು.

ADVERTISEMENT

ಮಧುಗಿರಿಯನ್ನು ಗಂಗ, ಚೋಳ, ಹೊಯ್ಸಳ, ವಿಜನಗರದ ಅರಸರು, ನೊಣಬರು, ಹೈದರಾಲಿ ಆಳ್ವಿಕೆ ನಡೆಸಿರುವುದು ಇತಿಹಾಸ ಸಾರುತ್ತಿದೆ ಎಂದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಸಮ್ಮೇಳನಗಳು ಎಲ್ಲರನ್ನೂ ಒಗ್ಗೂಡಿಸುವ ಅಕ್ಷರ ಜಾತ್ರೆಗಳು. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಮನಸ್ಸುಗಳು ಒಂದು ಕಡೆ ಸೇರುತ್ತಿರುವುದು ಕನ್ನಡ ಪರವಾದ ಬದ್ಧತೆ, ಕೂಗು, ಪಿಸು ಧ್ವನಿ ಕೇಳಿಸುತ್ತದೆ ಎಂದರು.

ಸಮ್ಮೇಳನಗಳಿಂದ ಪ್ರಯೋಜನಗಳೇನು ಎಂದು ನಿರಂತರ ಚರ್ಚೆ ನಡೆಯುತ್ತಿರುವ ಕಾಲಘಟ್ಟದಲ್ಲಿ ಸಮ್ಮೇಳನಗಳಲ್ಲಿ ಊಟ, ಹಾಜರಾತಿ ಪ್ರತಿ, ಬ್ಯಾಗ್‌ಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುತ್ತಿದ್ದು ಏನನ್ನು ಸಾಧಿಸಲಾಗಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಕನ್ನಡದ ಶಕ್ತಿ ಅಸಾಮಾನ್ಯ. ಕನ್ನಡ ಪ್ರಜ್ಞೆ ವಿಸ್ತರಣೆಯಾಗಬೇಕಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿರಬೇಕು. ಬಾಹ್ಯದಲ್ಲೂ ಕನ್ನಡ ಪ್ರಜ್ಞೆ ಇರಬೇಕು. ಕನ್ನಡ ಇಲ್ಲದಿದ್ದರೆ ಪತ್ರಿಕೆ ಓದುವವರು, ಕನ್ನಡ ಸಿನಿಮಾ ನೋಡುವವರು ಯಾರು ಇರುವುದಿಲ್ಲ. ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದರು.

ಕಡ್ಡಾಯ ಶಿಕ್ಷಣ ಕಾಯ್ದೆ ಪ್ರಕಾರ ಎರಡು ಕಿ.ಮೀ.ಗೆ ಕಿರಿಯ ಪ್ರಾಥಮಿಕ ಶಾಲೆ, 3 ಕಿ.ಮೀ.ಗೆ ಹಿರಿಯ ಪ್ರಾಥಮಿಕ ಶಾಲೆ, 5 ಕಿ.ಮೀಗೆ ಫ್ರೌಢಶಾಲೆಗಳಿರಬೇಕು. ಆದರೆ ಇಂದು ಕೆಪಿಎಸ್ ಶಾಲೆಗಳ ಸಂಖ್ಯೆ ಹೆಚ್ಚುತ್ತಿವೆ. ಒಬ್ಬನೇ ಒಬ್ಬ ವಿದ್ಯಾರ್ಥಿ ಇದ್ದರೂ ಕನ್ನಡ ಶಾಲೆ ಮುಚ್ಚುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಕೆಲ ಕಡೆ ಶಾಲೆಗಳ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಮುಚ್ಚುವುದಿಲ್ಲ ವಿಲೀನಗೊಳಿಸುತ್ತೇವೆ ಎಂದು ಇದರ ಅರ್ಥವೇ ಎಂದು ಪ್ರಶ್ನಿಸಿದರು.

ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಕನ್ನಡದ ನೆಲದಲ್ಲೇ ಕನ್ನಡಕ್ಕಾಗಿ ಹೋರಾಡುವ ಸನ್ನಿವೇಶ ಇದೆ. ವಿಧಾನಸಭೆಯಲ್ಲಿ ಕನ್ನಡಕ್ಕೆ ಶೇ 60, ಬೇರೆ ಬಾಷೆಗೆ ಶೇ 40 ಎಂದು ವಿಧೇಯಕ ಮಂಡಿಸಿದ್ದು, ಕಾನೂನು ತಂದು ಕನ್ನಡ ಉಳಿಸಿಕೊಳ್ಳಬೇಕಿರುವುದು ವಿಷಾದನೀಯ. ಸಾಹಿತ್ಯ ಲೋಕದ ದಿಕ್ಕನ್ನು ಬದಲಿಸಿದ್ದು ಕುವೆಂಪು ಎಂದರು.

ಪಟ್ಟಣದ ಕನ್ನಡ ಭವನ ಸಾಂಸ್ಕೃತಿಕ ಕೇಂದ್ರವಾಗಬೇಕು. ಯುವಪೀಳಿಗೆಗೆ ಆಸಕ್ತಿ ಮೂಡಿಸುವ ರೀತಿಯಲ್ಲಿ ಲೇಖನಗಳು ಮೂಡಬೇಕು. ಪ್ರತಿ ವರ್ಷ ಸಮ್ಮೇಳನಗಳು ತಾಲ್ಲೂಕಿನಲ್ಲಿ ನಡೆಯಬೇಕು ಎಂದು ಆಶಿಸಿದರು.

ಬಿಎಂಟಿಸಿ ಉಪಾಧ್ಯಕ್ಷ ನಿಖಿತ್ ರಾಜ್ ಮೌರ್ಯ, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ಧಲಿಂಗಪ್ಪ, ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರಂಗಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಾಲ ಗುರುಮೂರ್ತಿ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೌಡಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ನಿರ್ಮಾಪಕ ರವಿ ಆರ್. ಗರಣಿ, ಕಸಾಪ ಅಧ್ಯಕ್ಷೆ ಸಹನಾ, ಪದಾದಿಕಾರಿಗಳು, ಸಾಹಿತಿ ಮಲನ ಮೂರ್ತಿ, ಸಾಹಿತಿಗಳು, ಸಾಹಿತ್ಯಾಸಕ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಸಮ್ಮೇಳನದ ಅಧ್ಯಕ್ಷ ಕೆ.ಪಿ.ನಟರಾಜ್ ಅವರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು

ಮೆರವಣಿಗೆ

ಪುರಸಭೆ ಆವರಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನದ ಅಧ್ಯಕ್ಷ ಕೆ.ಪಿ.ನಟರಾಜ್ ಅವರನ್ನು ಕಲಾ ತಂಡಗಳೊಂದಿಗೆ ಬೆಳ್ಳಿ ರಥದ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ‘ಕೃಷ್ಣಮೃಗ’ ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.