ADVERTISEMENT

ನೊಣ ಬಾಧೆಗೆ ತೆಂಗು, ಮಾವು ತತ್ತರ

ಬೆಲೆ ಕುಸಿತದಿಂದ ಸಂಕಷ್ಟ; ಇದೀಗ ಬೆಳೆ ರಕ್ಷಣೆಯ ಸವಾಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 11:24 IST
Last Updated 14 ಮಾರ್ಚ್ 2020, 11:24 IST
ತೆಂಗಿನ ಮರಕ್ಕೆ ಬಿಳಿ ನೊಣಗಳ ಬಾಧೆ ತಗುಲಿರುವುದು.
ತೆಂಗಿನ ಮರಕ್ಕೆ ಬಿಳಿ ನೊಣಗಳ ಬಾಧೆ ತಗುಲಿರುವುದು.   

ತುಮಕೂರು: ಒಂದೆಡೆ ಬೆಲೆ ಕುಸಿತದಿಂದಾಗಿ ಕಂಗೆಟ್ಟ ಜಿಲ್ಲೆಯ ತೆಂಗು, ಮಾವು ಬೆಳೆಗಾರರು ಇದೀಗ ನೊಣ, ಕೀಟಗಳ ಬಾಧೆಯಿಂದ ಮತ್ತಷ್ಟು ಆತಂಕಕ್ಕೆ ಸಿಲುಕಿದ್ದಾರೆ.

ತೆಂಗಿಗೆ ಬಿಳಿ ನೊಣಗಳ ಬಾಧೆ ಹಾಗೂ ಮಾವಿಗೆ ಹಣ್ಣಿನ ನೊಣ ಬಾಧೆಯಿಂದ ರೈತರು ಕಂಗಲಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸರಾಸರಿ ಶೇ 25ರಷ್ಟು ಇಳುವರಿ ನಷ್ಟವಾಗುವ ಸಾಧ್ಯತೆಯಿದೆ. ಈವರೆಗೆ ಹೊರ ಜಿಲ್ಲೆಗಳಲ್ಲಿ ಬಾಧಿಸತೊಡಗಿದ್ದ ಬಿಳಿ ನೊಣಗಳು, ಹಣ್ಣಿನ ನೊಣಗಳು ಇದೀಗ ಜಿಲ್ಲೆಗೂ ವ್ಯಾಪಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ತೆಂಗು ಬೆಳೆಯಲ್ಲಿ ತುರುವೇಕೆರೆ ತಾಲ್ಲೂಕಿನದ್ದೆ ಸಿಂಹಪಾಲು. ಇಲ್ಲಿ 36 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಗುಬ್ಬಿ ತಾಲ್ಲೂಕಿನಲ್ಲಿ 34 ಸಾವಿರ, ಚಿಕ್ಕನಾಯಕನಹಳ್ಳಿ 34 ಸಾವಿರ, ತಿಪಟೂರು 32 ಸಾವಿರ, ತುಮಕೂರು 15 ಸಾವಿರ, ಶಿರಾ 12 ಸಾವಿರ, ಕುಣಿಗಲ್‌ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ.

ADVERTISEMENT

ಮಾವು ಬೆಳೆಯುವ ಪೈಕಿ ಗುಬ್ಬಿ ತಾಲ್ಲೂಕಿನಲ್ಲಿ 7069 ಹೆಕ್ಟೇರ್‌, ತುಮಕೂರು 6249, ಕುಣಿಗಲ್ 3569, ಪಾವಗಡ 1379, ಶಿರಾ 1074, ಮಧುಗಿರಿ 1051, ಕೊರಟಗೆರೆ 822, ತುರುವೇಕೆರೆ 328, ತಿಪಟೂರು 300, ಚಿಕ್ಕನಾಯಕನಹಳ್ಳಿ 286 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ತೆಂಗಿಗೆ ಹಳದಿ ರೋಗ, ನುಸಿ ರೋಗ, ಕೆಂಪುಮೂತಿ ಹುಳ, ಸಿರಿಕೊಳೆ ರೋಗ ಹಾಗೂ ಮಾವಿಗೆ ಜಿಗಿ ಹುಳು, ಕಾಂಡಕೊರಕ, ಹಣ್ಣು ಕೊರಕ, ಹಣ್ಣಿನ ನೊಣ, ವಾಟೆ ಕೊರಕ ರೋಗ ಬಾಧೆಯಿಂದ ಕಂಗೆಟ್ಟಿದ್ದರು. ಇದೀಗ ಬಿಳಿ ನೊಣ ಹಾವಳಿಯಿಂದ ಬೆಚ್ಚಿ ಬಿದ್ದಿದ್ದಾರೆ. ಜಿಲ್ಲೆಯ ಹಲವೆಡೆ ಬಿಳಿ ನೊಣಗಳ ಹಾವಳಿ ಇರುವುದನ್ನು ತೋಟಗಾರಿಕೆ ಇಲಾಖೆಯೂ ದೃಢಪಡಿಸಿದೆ.

ಏನಿದು ಸಮಸ್ಯೆ?

ಬಿಳಿ ನೊಣಗಳು ತೆಂಗಿನಗರಿಗಳ ಕೆಳಭಾಗದಲ್ಲಿ ಕುಳಿತು ರಸ ಹೀರುತ್ತವೆ. ಅವು ಆಕ್ರಮಿಸಿದಾಗ ತೆಂಗಿನ ಗರಿಗಳ ಬಣ್ಣ ಮಾಸುತ್ತದೆ. ಮರಗಳ ಆಹಾರೋತ್ಪಾದನೆ ಸ್ಥಗಿತಗೊಂಡು, ತೆಂಗಿನ ಗರಿಗಳ ಬೆಳವಣಿಗೆ ಹಾಗೂ ಇಳುವರಿ ಕುಂಠಿತಗೊಳ್ಳುತ್ತದೆ.ಕ್ರಮೇಣ ಇಡೀ ಮರ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ, ತೆಂಗಿನ ಮರಗಳು ಸಾಯುವುದಿಲ್ಲ. ಇಳುವರಿ ಮಾತ್ರ ತೀರಾ ಕಡಿಮೆಯಾಗುತ್ತದೆ.

ಮುಂಜಾಗ್ರತಾ ಕ್ರಮವೇನು?: ತೆಂಗಿನ ತೋಟದಲ್ಲಿ ಬಿಳಿ ನೊಣಗಳ ಹಾವಳಿ ಕಂಡುಬಂದರೆ 1 ಲೀಟರ್‌ ನೀರಿಗೆ 3ರಿಂದ 4 ಲೀಟರ್ ಬೇವಿನ ಎಣ್ಣೆ ಬೆರೆಸಿ ಸಿಂಪಡಿಸಬೇಕು. ನೊಣಗಳನ್ನು ಸೆಳೆಯಲು ಹಳದಿ ಜಿಗುಟಾದ ಆಕರ್ಷಕ ಬಲೆ ಅಳವಡಿಸುವುದು. ಮಣ್ಣು ಪರೀಕ್ಷೆಯ ಪ್ರಕಾರ ಪೋಷಕಾಂಶಗಳನ್ನು ನೀಡುವುದು. ಇಳುವರಿ ಆರಂಭವಾಗಿರುವ ಗಿಡಗಳಲ್ಲಿ ಬಾಧೆ ನಿಯಂತ್ರಿಸಲು ಎಲೆಗಳ ಕೆಳಭಾಗದಲ್ಲಿ ನೀರಿನ ಸಿಂಪರಣೆ ಮಾಡುವುದರಿಂದ ಬಿಳಿ ನೊಣಗಳ ಹಾವಳಿ ತಪ್ಪಿಸಬಹುದು ಎಂದು ತೋಟಗಾರಿಕೆ ಇಲಾಖೆ ಸಲಹೆ ನೀಡಿದೆ.

ಮಾವು ರಕ್ಷಣೆಗೆ ಮೋಹಕ ಬಲೆ: ಹವಾಮಾನ ಏರುಪೇರಿನಿಂದ ಪ್ರಸಕ್ತ ಸಾಲಿನಲ್ಲಿ ಮಾವಿನ ಫಸಲು ಕಡಿಮೆಯಾಗುವ ಸಂಭವವಿದ್ದು, ಕೀಟಗಳಿಂದ ರಕ್ಷಿಸಿಕೊಳ್ಳಲು ರೈತರಿಗೆ ಮೋಹಕ ಬಲೆ ಹೆಚ್ಚು ಸಹಕಾರಿಯಾಗಿದೆ. ಪ್ರತಿ ಹೆಕ್ಟೆರ್ ಪ್ರದೇಶದಲ್ಲಿ 10 ಮೋಹಕ ಬಲೆಗಳನ್ನು ತೂಗು ಹಾಕುವುದರಿಂದ ಕೀಟಗಳು ಮೋಹಕ ಬಲೆಗೆ ಆಕರ್ಷಿತವಾಗಿ ಸಾಯುತ್ತವೆ.

--

ಮೋಹಕ ಬಲೆ ತಯಾರಿಕೆ

ನೀರಿನ ಬಾಟಲಿ ಬಾಯಿಯಿಂದ 3–4 ಇಂಚು ಕೆಳಗೆ ಎರಡು ದಿಕ್ಕುಗಳಲ್ಲಿ ಎದುರು ಬದುರಾಗಿ 2 ಸೆಂ.ಮೀ ಅಳತೆಯ ರಂಧ್ರಗಳನ್ನು ಮಾಡುವುದು. ಒಂದು ಪ್ಲೈವುಡ್ ತುಂಡನ್ನು 2 ಸೆಂ.ಮೀ ಅಗಲ 5 ಸೆಂ.ಮೀ ಉದ್ದ ಅಳತೆಯಲ್ಲಿ ಕತ್ತರಿಸಿ ಅದಕ್ಕೆ ಮಿಥೈಲ್ ಯುಜಿನಾಲ್ ಹಾಗೂ ಡೈಕ್ಲೊರೊವಾಸ್ ತಲಾ 1 ಮಿ.ಲೀ ಲೇಪಿಸಬೇಕು. ಪ್ಲೈವುಡ್ ತುಂಡನ್ನು ದಾರ ಅಥವಾ ತಂತಿಯ ಸಹಾಯದಿಂದ ಬಾಟಲಿಯ ಒಳಗೆ ಸೇರಿಸಿ ಮರಗಳಿಗೆ ಕಟ್ಟಬೇಕು. ಕೊಯ್ಲಿನವರೆಗೆ ಪ್ರತಿ 10 ದಿನಗಳಿಗೊಮ್ಮೆ ಔಷಧಿ ಲೇಪಿಸಬೇಕು. ಆಗ ಕೀಟಗಳು ಮೋಹಕ ಬಲೆಗೆ ಆಕರ್ಷಿತವಾಗಿ ಸಾಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.