ADVERTISEMENT

ವಿವಾಹಿತನ ಕಿರುಕುಳ: ಗ್ಯಾರಹಳ್ಳಿ ಗ್ರಾಮದ ಯುವತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 7:44 IST
Last Updated 31 ಜುಲೈ 2025, 7:44 IST
ಭಾವನಾ
ಭಾವನಾ   

ತುಮಕೂರು: ವಿವಾಹಿತ ವ್ಯಕ್ತಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಗುಬ್ಬಿ ತಾಲ್ಲೂಕಿನ ಗ್ಯಾರಹಳ್ಳಿ ಗ್ರಾಮದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭಾವನಾ (22) ಆತ್ಮಹತ್ಯೆಗೆ ಶರಣಾದ ಯುವತಿ. ನೆಲಮಂಗಲದ ಚಿಕ್ಕಮ್ಮನ ಮನೆಯಲ್ಲಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಗ್ಯಾರಹಳ್ಳಿ ಗ್ರಾಮದ ನವೀನ್‌ ಎಂಬುವರಿಗೆ ಈಗಾಗಲೇ ಮದುವೆಯಾಗಿತ್ತು. ಆದರೂ ಭಾವನಾ ಜತೆಗೆ ಸುತ್ತಾಡುತ್ತಿದ್ದು, ಆಕೆಯ ಜತೆಗೆ ತೆಗೆಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಡಲಾಗುವುದು ಎಂದು ಬ್ಲ್ಯಾಕ್‌ ಮಾಡುತ್ತಿದ್ದರು. ಇದರಿಂದ ಬೇಸತ್ತು ಭಾವನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.

ADVERTISEMENT

‘ಮಗಳು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು. ನವೀನ್‌ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈಚೆಗೆ ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕಿರುಕುಳದಿಂದ ನೊಂದು ಭಾವನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತಳ ತಂದೆ ಶಿವಣ್ಣ ಆರೋಪಿಸಿದ್ದಾರೆ.

‘ಮಗಳು ಮೈಸೂರಿನಲ್ಲಿ ಓದುತ್ತಿದ್ದ ಸಮಯದಲ್ಲಿ ನವೀನ್‌ಗೆ ಹಣ ಕೊಟ್ಟು ಫೋನ್‌ಪೇ ಮೂಲಕ ಮಗಳ ಮೊಬೈಲ್ ನಂಬರ್‌ಗೆ ಹಾಕಿಸುತ್ತಿದ್ದೆ. ಆಗ ನೀಡಿದ ಮೊಬೈಲ್ ನಂಬರ್‌ ದುರುಪಯೋಗ ಪಡಿಸಿಕೊಂಡು ಕಿರುಕುಳ ನೀಡುತ್ತಿದ್ದ. ಓದು ಮುಗಿಸಿ ಕೆಲಸಕ್ಕೆ ಸೇರಿದ ನಂತರವೂ ಕಿರುಕುಳ ಮುಂದುವರಿಸಿದ್ದ. ಪ್ರೀತಿಸದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ’ ಎಂದು ಹೇಳಿದರು.

ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಆರೋಪಿ ನಾಪತ್ತೆಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ನೆಲಮಂಗಲ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.