ADVERTISEMENT

ಆ.14ರಂದು ‘ಮತ್ತೆ ಕಲ್ಯಾಣ’ ಅಭಿಯಾನ

ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿ, ಪ್ರಗತಿಪರರ ಮುಕ್ತ ಸಂವಾದ, ಸಾರ್ವಜನಿಕ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 15:28 IST
Last Updated 9 ಆಗಸ್ಟ್ 2019, 15:28 IST
ಟಿ.ಬಿ.ಶೇಖರ್‌
ಟಿ.ಬಿ.ಶೇಖರ್‌   

ತುಮಕೂರು: ಶರಣರ ಜೀವನ, ವಚನಗಳು ಹಾಗೂ ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಆರಂಭವಾಗಿರುವ ‘ಮತ್ತೆ ಕಲ್ಯಾಣ ಅಭಿಯಾನ’ದ ವಿವಿಧ ಕಾರ್ಯಕ್ರಮಗಳು ನಗರದಲ್ಲಿ ಆಗಸ್ಟ್‌ 14ರಂದು ನಡೆಯಲಿದೆ.

ಸಹಮತ ವೇದಿಕೆಯು ಜಿಲ್ಲೆಯಲ್ಲಿ ನಡೆಯುವ ಅಭಿಯಾನದ ಕಾರ್ಯಕ್ರಮಗಳ ನೇತೃತ್ವ ವಹಿಸಿದೆ. ಸಿದ್ಧಿ ವಿನಾಯಕ ಕಲ್ಯಾಣ ಮಂಟಪದಲ್ಲಿ ಅಭಿಯಾನದ ಭಾಗವಾಗಿ ಗೋಷ್ಠಿ, ಸಂವಾದ ಮತ್ತು ಸಮಾವೇಶ ನಡೆಯಲಿವೆ.

ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಯಾನದ ಮುಂದಾಳತ್ವ ವಹಿಸಿದ್ದಾರೆ. ಅಭಿಯಾನವು ಆಗಸ್ಟ್‌ 1ರಿಂದ ಆರಂಭವಾಗಿದೆ. ಪ್ರತಿ ಜಿಲ್ಲೆಯ ಮೂಲಕ ಸಾಗುತ್ತಿದೆ. ತುಮಕೂರಿಗೆ ಬರುತ್ತಿರುವ ಅಭಿಯಾನವನ್ನು ಎಲ್ಲ ಸಮುದಾಯ ಮುಖಂಡರು ಸ್ವಾಗತಿಸಲಿದ್ದಾರೆ ಎಂದು ಸಹಮತ ವೇದಿಕೆಯ ಅಧ್ಯಕ್ಷ ಟಿ.ಬಿ.ಶೇಖರ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ADVERTISEMENT

ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಲಿಂಗತಾರತಮ್ಯ, ಭ್ರಷ್ಟಾಚಾರ, ಶೋಷಣೆಯಿಂದ ಜನರು ಮುಕ್ತವಾಗಲು ಎಚ್ಚರಿಸುವುದು, ಶರಣರ ಅರಿವಿನ ಮಾರ್ಗ ಮತ್ತು ಆಶಯಗಳನ್ನು ಇಂದಿನ ಪೀಳಿಗೆಗೆ ತಿಳಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಧಾರ್ಮಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆ ಹದಗೆಟ್ಟಿರುವ ಈ ಸಮಯದಲ್ಲಿ ಸಮಾಜ ಸುಧಾರಣೆಯ ಅಗತ್ಯವಿದೆ. ಅನುಭವ ಮಂಟಪದ ಮೂಲಕ ಶರಣರು ಮಾಡಿದ ಪ್ರಯತ್ನವನ್ನು ನೆನಪಿಸಿಕೊಂಡು, ವಿಚಾರ ಕ್ರಾಂತಿಯ ಬೀಜವನ್ನು ಬಿತ್ತುವ ಸದಾಶಯ ಈ ಅಭಿಯಾನದಲ್ಲಿದೆ ಎಂದು ಅವರು ಹೇಳಿದರು.

ಅಭಿಯಾನದ ಭಾಗವಾಗಿ ಆ.14ರ ಬೆಳಿಗ್ಗೆ 10.30ಕ್ಕೆ ಮಹಾನಗರ ಪಾಲಿಕೆ ಮುಂಭಾಗದ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಸಾಮರಸ್ಯದ ನಡಿಗೆ ಆರಂಭವಾಗಲಿದೆ. ಇದರಲ್ಲಿ ಸ್ವಾಮೀಜಿಗಳು, ಮುಸ್ಲಿಂ, ಕ್ರೈಸ್ತ ಸಮುದಾಯದ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಬೆ.11.30ರಿಂದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಗತಿಪರ ಚಿಂತಕರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಮಾಡಲಿದ್ದಾರೆ. ಮ.3ರಿಂದ ಸಾರ್ವಜನಿಕ ಸಮಾವೇಶ ನಡೆಯಲಿದೆ. ಸಂಜೆ 6ಕ್ಕೆ ಶಿವ ಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನ ಇರಲಿದೆ ಎಂದು ಅವರು ಮಾಹಿತಿ ನೀಡಿದರು.

ವೇದಿಕೆಯ ಕಾರ್ಯದರ್ಶಿ ಜಿ.ಎಸ್‌.ಸೋಮಶೇಖರ್‌, ಸದಸ್ಯರಾದ ಡಿ.ಎನ್‌.ಯೋಗೀಶ್ವರಪ್ಪ, ಸುರೇಶ್‌, ರಾಜಶೇಖರ್‌, ಆರ್‌.ಸುರೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.