ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು

5 ವರ್ಷದಲ್ಲಿ ರಾಜ್ಯದಲ್ಲಿ 125 ತಾಯಿ ಮತ್ತು ಮಕ್ಕಳ ಆಸ್ಪತ್ರೆ: ಸುಧಾಕರ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 4:18 IST
Last Updated 24 ಫೆಬ್ರುವರಿ 2021, 4:18 IST
ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು
ಶಿರಾದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು   

ಶಿರಾ: ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ರಾಜ್ಯದ 10 ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಮಂಗಳವಾರ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು,ಮುಂದಿನ 5 ವರ್ಷದಲ್ಲಿರಾಜ್ಯದಲ್ಲಿ ಒಟ್ಟು125 ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರಾರಂಭಿಸಲಾಗುವುದು. ಕ್ಯಾನ್ಸರ್, ಮೂತ್ರಪಿಂಡ ಮತ್ತು ಹೃದಯಕ್ಕೆ ಸಂಬಂಧಿಸಿದ ರೋಗಳಿಗೆ ದೂರ ಪ್ರದೇಶದಿಂದ ಬೆಂಗಳೂರಿಗೆ ಬರಲು ಕಷ್ಟವಾಗುವುದರಿಂದ ನಾಲ್ಕು ಕಡೆ ಪ್ರಾದೇಶಿಕ ಕೇಂದ್ರಗಳನ್ನು ಪ್ರಾರಂಭಿಸಿ ಅಭಿವೃದ್ಧಿಪಡಿಸುವ ಗುರಿ ಇದೆ ಎಂದು ತಿಳಿಸಿದರು.

ತುಮಕೂರಿನಲ್ಲಿ ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ತುಮಕೂರಿನಲ್ಲಿ ₹35 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರ ಪ್ರಾರಂಭಿಸಲು ಟೆಂಡರ್ ಕರೆಯಲಾಗಿದೆ ಎಂದರು.

ADVERTISEMENT

‘ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಇಲ್ಲಿ ದೊರೆಯುವುದರಿಂದ ಹೆರಿಗೆಗಾಗಿ ಯಾರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬಾರದು. ನವಜಾತ ಶಿಶು ಮತ್ತು ಬಾಣಂತಿಯರ ಸಾವು ಸಂಭವಿಸದಂತೆ ಜಾಗ್ರತೆ ವಹಿಸಬೇಕು’ ಎಂದುಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಶಿರಾದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವಂತೆವಿಧಾನ ಪರಿಷತ್‌ ಸದಸ್ಯ ಚಿದಾನಂದ ಎಂ.ಗೌಡ ಅವರು ಸಚಿವರಿಗೆ ಮನವಿ ಮಾಡಿದರು. ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಸಂಸದ ಎ.ನಾರಾಯಣಸ್ವಾಮಿ ಮಾತನಾಡಿದರು.

ಜಿ.ಪಂ ಅಧ್ಯಕ್ಷೆ ಲತಾ ರವಿಕುಮಾರ್, ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ತಾ.ಪಂ ಅಧ್ಯಕ್ಷ ಚಂದ್ರಯ್ಯ, ಉಪಾಧ್ಯಕ್ಷ ರಂಗನಾಥ ಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಂ.ಲಕ್ಷ್ಮಿಶ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್.ಪಿ ಡಾ.ವಂಶಿಕೃಷ್ಣ, ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂಪ್ರಕಾಶ್ ಪಾಟೀಲ್, ತಹಶೀಲ್ದಾರ್ ಮಮತ, ಜಿಲ್ಲಾವೈದ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಡಾ.ಸನತ್ ಕುಮಾರ್, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರೆಹಮಾನ್, ಡಾ‌.ಡಿ.ಎಂ.‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.