ADVERTISEMENT

ಕುಣಿಗಲ್: ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಜಟಾಪಟಿ

ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷರು, ಸದಸ್ಯತ್ವ ಆಕಾಂಕ್ಷಿಗಳ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:16 IST
Last Updated 26 ಅಕ್ಟೋಬರ್ 2024, 6:16 IST
ಕುಣಿಗಲ್ ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಆಗ್ರಹಿಸಿದ ಗುಂಪು ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡರೊಂದಿಗೆ ವಾಗ್ವಾದ ನಡೆಸಿತು
ಕುಣಿಗಲ್ ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಆಗ್ರಹಿಸಿದ ಗುಂಪು ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡರೊಂದಿಗೆ ವಾಗ್ವಾದ ನಡೆಸಿತು   

ಕುಣಿಗಲ್: ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯತ್ವಕ್ಕೆ ಆಗ್ರಹಿಸಿದ ಗುಂ‍ಪೊಂದು ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡರ ಜತೆ ಶುಕ್ರವಾರ ಜಟಾಪಟಿ ನಡೆಸಿತು.

ಪಟ್ಟಣದಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮುಖಂಡರಾದ ಬಿದನಗೆರೆ ಶ್ರೀನಿವಾಸ್, ಮಲ್ಲಾಘಟ್ಟ ನಾರಾಯಣ್, ಕಲ್ಲನಾಯಕನಹಳ್ಳಿ ಶಿವಣ್ಣ ಸೇರಿದಂತೆ ಅನೇಕರು ಸದಸ್ಯತ್ವ ನೀಡುವಂತೆ ಮನವಿ ಸಲ್ಲಿಸಿದರು. ರಾಮಸ್ವಾಮಿಗೌಡ ಅರ್ಜಿ ಸ್ವೀಕರಿಸಿ ಮುಂದಿನ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದರು. ಈ ಸಭೆಯಲ್ಲಿಯೇ ಚರ್ಚಿಸುವಂತೆ ಗುಂಪು ಆಗ್ರಹಿಸಿತು.

ಈಗಾಗಲೇ ಸದಸ್ಯತ್ವ ಕೋರಿ ಹಲವು ಅರ್ಜಿಗಳು ಬಂದಿವೆ. ಎಲ್ಲವನ್ನೂ ಕ್ರೂಡೀಕರಿಸಿ ಸಂಘಕ್ಕೆ ಹೆಚ್ಚಿನ ಸದಸ್ಯತ್ವದ ಅಗತ್ಯವಿದ್ದರೆ ಮಾತ್ರ ಪರಿಗಣಿಸುವುದಾಗಿ ರಾಮಸ್ವಾಮಿಗೌಡ ಸ್ಪಷ್ಟಪಡಿಸಿದರು.

ADVERTISEMENT

ತೀವ್ರ ವಿರೋಧ ವ್ಯಕ್ತಪಡಿಸಿದ ಮುಖಂಡರು, ‘ತಾಲ್ಲೂಕಿನಲ್ಲಿ 1.50 ಲಕ್ಷ ಒಕ್ಕಲಿಗರಿದ್ದಾರೆ. ನಿಮಗೆ ಬೇಕಾದವರಿಗೆ ಮಾತ್ರ ಸದಸ್ಯತ್ವ ನೀಡಿ ಸಂಘದ ಅವ್ಯವಸ್ಥೆಗೆ ಕಾರಣವಾಗಿದ್ದೀರಿ’ ಎಂದು ಆರೋಪಿಸಿದಾಗ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರ ಬೆಂಬಲಕ್ಕೆ ಆಡಳಿತ ಮಂಡಳಿ ಸದಸ್ಯರು ನಿಂತಾಗ ಎರಡು ಗುಂಪಿನ ನಡುವೆ ತೀವ್ರ ವಾಗ್ವಾದ ನಡೆಯಿತು. ಕೆಲ ನಿರ್ದೇಶಕರು ಮಧ್ಯಪ್ರವೇಶಿಸಿ ಪರಿಸ್ಥತಿ ತಿಳಿಗೊಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ, ತಾಲ್ಲೂಕು ಒಕ್ಕಲಿಗರ ಸಂಘ ಜಾತಿ ಆದಾರದಲ್ಲಿ ನಡೆಯುತ್ತಿರುವ ಸಂಘವಲ್ಲ. ಸರ್ಕಾರದ ಸಹಕಾರ ಇಲಾಖೆಯ ನೀತಿ ನಿಯಮಾವಳಿಗಳ ಪ್ರಕಾರ ನಡೆಯುತ್ತಿದೆ. ಈ ಹಿಂದೆ 350 ಸದಸ್ಯತ್ವ ನೀಡಲಾಗಿದ್ದರೂ, ನೀತಿ ನಿಯಮಗಳ ಪಾಲನೆಯಾಗದ ಕಾರಣ ಕಾನೂನಿನಲ್ಲಿ ಮಾನ್ಯತೆ ಸಿಗದೆ 511 ಸದಸ್ಯರು ಮಾತ್ರ ಇದ್ದಾರೆ. ಕಳೆದ ಸದಸ್ಯರ ಸಭೆಯಲ್ಲಿ ನಿರ್ದೇಶಕ ಬಿ.ಕೆ.ರಾಮಣ್ಣ ಸಲಹೆ ಮೇರೆಗೆ ನೂತನ ಸದಸ್ಯತ್ವ ನೀಡಲು ನಿರ್ಧರಿಸಿ 100 ಮದಿ ಸದಸ್ಯತ್ವ ನೀಡಲಾಗಿದೆ. ಸಂಘಕ್ಕೆ ಹೆಚ್ಚಿನ ಸದಸ್ಯತ್ವದ ಅಗತ್ಯತೆ ಇಲ್ಲದ ಕಾರಣ ಮನವಿ ಸ್ವೀಕರಿಸಲಾಗಿದೆ. ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಕೃಷ್ಣೆಗೌಡ, ದೇವರಾಜು, ರಂಗಸ್ವಾಮಿ, ಶ್ರೀನಿವಾಸ್, ಎಂ.ಜಿ.ನಾರಾಯಣ, ಸಿದ್ದಗಂಗಯ್ಯ, ಮಡಕೆಹಳ್ಳಿ ಶಿವಣ್ಣ, ವೆಂಕಟೇಶ್, ಕೃಷ್ಣ ಹಾಜರಿದ್ದರು.

ಅ. 30ರಂದು ಪ್ರತಿಭಟನೆ

ಸದಸ್ಯತ್ವಕ್ಕೆ ಆಗ್ರಹಿಸಿದ ಒಕ್ಕಲಿಗ ಮುಖಂಡರ ಬಣ ಸುದ್ದಿಗೋಷ್ಠಿ ನಡೆಸಿ ಅಕ್ಟೋಬರ್ 30ಕ್ಕೆ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿತು. ವೈ.ಎಸ್.ಅರುಣ್ ಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ 1.50 ಲಕ್ಷ ಒಕ್ಕಲಿಗರಿದ್ದರೂ ಸಂಘದಲ್ಲಿ 511 ಸದಸ್ಯರು ಮಾತ್ರ ಇದ್ದಾರೆ. ಮುಕ್ತವಾಗಿ ಸದಸ್ಯತ್ವ ನೀಡಲು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ನಿಯಮಾವಳಿ ಪ್ರಕಾರ ಆಡಳಿತ ಮಂಡಳಿ ಅವಧಿ ಮುಗಿದಿದೆ. ಅಧ್ಯಕ್ಷ ಬಿ.ಬಿ.ರಾಮಸ್ವಾಮಿ ಗೌಡ ಅನಧಿಕೃತವಾಗಿ ಅಧಿಕಾರದಲ್ಲಿದ್ದಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.