ADVERTISEMENT

ತುಮಕೂರು ಡೇರಿಯಲ್ಲೇ ಉಳಿದ 300 ಟನ್ ಪೌಡರ್: ಬಟವಾಡೆಗೆ ಸಮಸ್ಯೆಯಾಗುವ ಆತಂಕ

ದಾಸ್ತಾನಿನಿಂದ ಹಣದ ಹರಿವು ಸ್ಥಗಿತ; ಎದುರಾಗಲಿದೆಯೇ ಬಟವಾಡೆ ಸಮಸ್ಯೆ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಮೇ 2020, 5:55 IST
Last Updated 7 ಮೇ 2020, 5:55 IST
ಸಿ.ವಿ.ಮಹಾಲಿಂಗಯ್ಯ
ಸಿ.ವಿ.ಮಹಾಲಿಂಗಯ್ಯ   

ತುಮಕೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಾಲಿನ ಪೌಡರ್ ಬೆಲೆ ಕುಸಿದರೆ ಜಿಲ್ಲೆಯ ರೈತರ ಮೇಲೂ ತೀವ್ರ ದುಷ್ಪರಿಣಾಮ ಬೀರಲಿದೆ.

ಲಾಕ್‌ಡೌನ್ ಪರಿಣಾಮ ಉತ್ಪಾದನೆಯಾದ ಎಲ್ಲಾ ಹಾಲು ಮಾರಾಟವಾಗಲಿಲ್ಲ. ಈ ಮಾರುಕಟ್ಟೆ ವ್ಯತ್ಯಾಸದ ಪರಿಣಾಮ ಬಹುತೇಕ ಒಕ್ಕೂಟಗಳ ಬಳಿ ಲಕ್ಷ ಲಕ್ಷ ಲೀಟರ್ ಹಾಲು ನಿತ್ಯ ಖರ್ಚಾಗದೆ ಉಳಿಯುತ್ತಿದೆ. ಕೆಲವು ಒಕ್ಕೂಟಗಳು ರೈತರು ಪೂರೈಸುವ ಹಾಲಿನ ದರ ಇಳಿಕೆಗೂ ಮುಂದಾಗಿದ್ದವು. ನಷ್ಟ ಎದುರಿಸಬೇಕಾಗುತ್ತದೆ ಎನ್ನುವುದನ್ನು ಮನಗಂಡ ಒಕ್ಕೂಟಗಳು ಉಳಿದ ಹಾಲನ್ನು ಪೌಡರ್ ಆಗಿ ಪರಿವರ್ತಿಸಿದವು.

ಈ ಲಾಕ್‌ಡೌನ್ ಅವಧಿಯಲ್ಲಿ ಉತ್ಪಾದನೆಯಾದ 300 ಟನ್ ಪೌಡರ್ ತುಮಕೂರು ಹಾಲು ಒಕ್ಕೂಟದ (ತುಮುಲ್) ಬಳಿ ದಾಸ್ತಾನಿದೆ. ಇದರ ಒಟ್ಟಾರೆ ಮೌಲ್ಯ ₹ 10 ಕೋಟಿಗೂ ಹೆಚ್ಚು! ತುಮುಲ್ ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ಹಾಲನ್ನು ಪೌಡರ್ ಆಗಿ ಪರಿವರ್ತಿಸಿದ್ದು ಇದೇ ಮೊದಲು. ಹೀಗೆ ಎಲ್ಲ ಒಕ್ಕೂಟಗಳ ಬಳಿಯೂ ಪೌಡರ್ ದಾಸ್ತಾನು ಇದೆ.

ADVERTISEMENT

ಮುಂಬೈ ಹಾಗೂ ತುಮಕೂರು ಜಿಲ್ಲೆ ಹಾಲಿಗೆ ಪ್ರಮುಖ ಮಾರುಕಟ್ಟೆ. ಕೊರೊನಾ ಸೋಂಕಿಗೂ ಮುನ್ನ ನಿತ್ಯ ಮುಂಬೈಗೆ 2 ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿತ್ತು. ಮಹಾರಾಷ್ಟ್ರದಲ್ಲಿ ಸೋಂಕು ತೀವ್ರವಾದ ಪರಿಣಾಮ ಮಾರುಕಟ್ಟೆಗೆ ತೀವ್ರವಾದ ಪೆಟ್ಟುಬಿತ್ತು. ಈಗ ಈ ಮಾರುಕಟ್ಟೆ ಚೇತರಿಕೆಯ ಹಾದಿಯಲ್ಲಿದ್ದು 67 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ.

ಮುಂಬೈ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಹಾಲನ್ನು ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಈ ಕಾರಣದಿಂದ ದೊಡ್ಡ ಪ್ರಮಾಣದಲ್ಲಿಯೇ ಪೌಡರ್ ದಾಸ್ತಾನಿದೆ. ಈ ಹಿಂದಿನ ಕೆಲವು ವರ್ಷಗಳಲ್ಲಿ ಪೌಡರ್ ಬೆಲೆ ಕೆ.ಜಿ.ಗೆ ₹ 130, 140ಕ್ಕೆ ಬಂದ ಉದಾಹರಣೆಗಳು ಇವೆ. ಈ ಕಾರಣದಿಂದ ಬೆಲೆ ಕುಸಿದರೆ ಹೊರೆ ಎನ್ನುವ ಆತಂಕ ಒಕ್ಕೂಟವನ್ನು ಕಾಡುತ್ತಿದೆ.

‘ಒಂದು ಕೆ.ಜಿ ಪೌಡರ್ ಮಾಡಲು 10 ಲೀಟರ್ ಹಾಲು ಸಂಸ್ಕರಿಸಬೇಕು. ಸಂಸ್ಕರಣೆ ವೆಚ್ಚ ಎಲ್ಲ ಸೇರಿ ₹ 280ಕ್ಕೂ ಹೆಚ್ಚು ಬೆಲೆ ತಗಲುತ್ತದೆ. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಪೌಡರ್ ಬೆಲೆ ₹ 280 ಇದೆ. ಹೀಗೆ ಬೆಲೆ ಹೆಚ್ಚಳವಾದರೆ ಒಳ್ಳೆಯದು. ಒಂದು ವೇಳೆ ಕುಸಿದರೆ ಸಂಸ್ಥೆಗೆ ಆರ್ಥಿಕ ಹೊರೆ’ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಹೇಳಿದರು.

ಬಟವಾಡೆ ಸಮಸ್ಯೆ: ಸದ್ಯ ರೈತರಿಗೆ ಬಟವಾಡೆ ಸಮಸ್ಯೆ ಎದುರಾಗಿಲ್ಲ. ಹಾಲು ಮಾರಾಟದಿಂದ ನಿತ್ಯ ವಹಿವಾಟು ನಡೆಯುತ್ತಿದೆ. ಕಾಲ ಕಾಲಕ್ಕೆ ಹಣ ರೈತರನ್ನು ತಲುಪುತ್ತಿದೆ. ಆದರೆ ಪೌಡರ್ ದಾಸ್ತಾನಿನಿಂದ ಹಣದ ಚಲನೆ ಸ್ಥಗಿತವಾಗುತ್ತದೆ. ಮಾರುಕಟ್ಟೆಯಲ್ಲಿ ಪೌಡರ್ ಮಾರಾಟವಾಗುವವರೆಗೂ ಹಣದ ಹರಿವು ಇರುವುದಿಲ್ಲ. ಈ ಪರಿಣಾಮ ರೈತರು ಬಟವಾಡೆ ಸಮಸ್ಯೆ ಎದುರಿಸುವ ಸಾಧ್ಯತೆಯೂ ಇದೆ.

ಮಾರುಕಟ್ಟೆ ಚೇತರಿಕೆ

ಈಗ ಮಳೆ ಬಿದ್ದಿದೆ. ನಿತ್ಯ ಏಳೆಂಟು ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಿದೆ. ಆದರೆ ಮಾರುಕಟ್ಟೆಯ ಸಮಸ್ಯೆ ಇದೆ. ಈಗ ತುಮಕೂರಿನಲ್ಲಿ 1 ಲಕ್ಷ, ಬೆಂಗಳೂರಿಲ್ಲಿ 1.40 ಲಕ್ಷ ಲೀಟರ್ ಹಾಲು ನಿತ್ಯ ಮಾರಾಟವಾಗುತ್ತಿದೆ. 40 ಸಾವಿರ ಲೀಟರ್ ಮೊಸರಿಗೆ ಬಳಸಿಕೊಳ್ಳುತ್ತಿದ್ದೇವೆ. ಹಂತ ಹಂತವಾಗಿ ಮಾರುಕಟ್ಟೆ ಉತ್ತಮಗೊಳ್ಳುತ್ತಿದೆ ಎಂದು ಸಿ.ವಿ.ಮಹಾಲಿಂಗಯ್ಯ ತಿಳಿಸಿದರು.

ಬಡವರಿಗೆ ₹7 ಕೋಟಿ ಹಾಲು

ರಾಜ್ಯ ಸರ್ಕಾರದ ನಿರ್ದೇಶನದ ಮೇಲೆ ಏ. 3ರಿಂದ 30ರ ವರೆಗೆ ಜಿಲ್ಲೆಯಲ್ಲಿ ಕೊಳೆಗೇರಿ ಮತ್ತು ಬಡವರಿಗೆ ನಿತ್ಯ 75 ಸಾವಿರ ಲೀಟರ್ ಹಾಲು ಪೂರೈಸಿದೆವು. ಇದರ ಒಟ್ಟು ಮೌಲ್ಯ ₹ 7 ಕೋಟಿ. ಸರ್ಕಾರ ಇದರಲ್ಲಿ ₹ 2.49 ಕೋಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ ಎಂದು ತುಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಸುಬ್ರಾಯ ಭಟ್ ತಿಳಿಸಿದರು.

ಅಂಕಿ ಅಂಶ

6.50 ಲಕ್ಷ ಲೀಟರ್‌ ಹಾಲು– ಜಿಲ್ಲೆಯಲ್ಲಿ ನಿತ್ಯ ಉತ್ಪಾದನೆ

2.20 ಲಕ್ಷ ಲೀಟರ್ ಹಾಲು– ಪೌಡರ್‌ಗೆ ಬಳಕೆ

300 ಟನ್– ದಾಸ್ತಾನಿರುವ ಹಾಲಿನ ಪೌಡರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.