ADVERTISEMENT

ರೈತರಿಂದ ಖರೀದಿಸುವ ಹಾಲು ದರ ಲೀಟರ್‌ಗೆ ₹2 ಹೆಚ್ಚಿಸಿದ ತುಮಕೂರು ಒಕ್ಕೂಟ

ರೈತರಿಗೆ ಯುಗಾದಿ ಹಬ್ಬದ ಕೊಡುಗೆ ನೀಡಿದ ತುಮುಲ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 3:15 IST
Last Updated 27 ಮಾರ್ಚ್ 2021, 3:15 IST
   

ತುಮಕೂರು: ರೈತರಿಂದ ‘ತುಮುಲ್’ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹2 ಹೆಚ್ಚಳ ಮಾಡಿದ್ದು, ಇದು ಮಾರ್ಚ್ 1ರಿಂದಲೇ ಪೂರ್ವಾನ್ವಯವಾಗಲಿದೆ. ಆದರೆ ಗ್ರಾಹಕರುಖರೀದಿಸುವ ಹಾಲಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

3.5 ಜಿಡ್ಡಿನ ಅಂಶ ಇರುವ ಹಾಲಿಗೆ ಲೀಟರ್ ₹27 ಹಾಗೂ 4.1 ಜಿಡ್ಡಿನ ಅಂಶ ಇದ್ದರೆ ₹28.39ರಂತೆ ನೀಡಲಾಗುತ್ತದೆ. ಕಳೆದ ಫೆಬ್ರುವರಿಯಲ್ಲಿ ಲೀಟರ್‌ಗೆ ₹2 ಹೆಚ್ಚಳ ಮಾಡಿದ್ದು, ಈಗ ಮತ್ತೆ ಏರಿಕೆ ಮಾಡಿರುವುದರಿಂದ ಎರಡು ತಿಂಗಳಲ್ಲಿ ₹4 ಹೆಚ್ಚಳ ಮಾಡಿದಂತಾಗಿದೆ.

ರೈತರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು ಶುಕ್ರವಾರ ನಡೆದ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಬೆಲೆ ಏರಿಕೆಯಿಂದ ಒಕ್ಕೂಟಕ್ಕೆ ತಿಂಗಳಿಗೆ ₹4.50 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಭೆಯ ನಂತರ ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಕೋವಿಡ್–19 ಸಮಯದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗದೆ ಒಕ್ಕೂಟ ನಷ್ಟದಲ್ಲಿತ್ತು. ಈಗ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದ್ದು ಸುಮಾರು ₹9.50 ಕೋಟಿ ನಿವ್ವಳ ಲಾಭದಲ್ಲಿದೆ. ₹73.54 ಕೋಟಿ ಮೊತ್ತದ ಬೆಣ್ಣೆ, ಹಾಲಿನ ಪುಡಿ ದಾಸ್ತಾನು ಇದ್ದು, ಲಾಭದ ಪ್ರಮಾಣ ಹೆಚ್ಚಾಗಬಹುದು. ಒಕ್ಕೂಟ ಲಾಭದತ್ತ ಹೆಜ್ಜೆ ಹಾಕಿದ್ದು, ಅದರಲ್ಲಿ ಕೆಲ ಭಾಗವನ್ನು ರೈತರಿಗೆ ವರ್ಗಾಯಿಸುವ ಸಲುವಾಗಿ ಹಾಲು ಖರೀದಿ ದರ ಹೆಚ್ಚಿಸಲಾಗಿದೆ. ಇದು ಕೋಲಾರ ಒಕ್ಕೂಟ ನೀಡುತ್ತಿರುವ ದರಕ್ಕೆ ಸಮನಾಗಿದ್ದು, ಇತರ ಒಕ್ಕೂಟಗಳಿಗಿಂತ ಹೆಚ್ಚಿನ ದರ ನೀಡಿದಂತಾಗಿದೆ ಎಂದು ವಿವರಿಸಿದರು.

ಹಾಲು ಮಾರಾಟ ವೃದ್ಧಿ

ಪ್ರಸ್ತುತ ಪ್ರತಿ ದಿನ ಸರಾಸರಿ 7 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು, ಹಾಲು, ಮೊಸರಿನ ರೂಪದಲ್ಲಿ 6 ಲಕ್ಷ ಲೀಟರ್ ಮಾರಾಟವಾಗುತ್ತಿದೆ. ಉಳಿದ 1 ಲಕ್ಷ ಲೀಟರ್ ಹಾಲಿನ ಪುಡಿ, ಬೆಣ್ಣೆ ಹಾಗೂ ಇತರ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಮುಂಬೈ ನಗರದಲ್ಲಿ ಪ್ರತಿ ದಿನ 1.20 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆಯಲ್ಲಿ ಪ್ರತಿ ತಿಂಗಳು 50 ಸಾವಿರ ಕೆ.ಜಿ ಹಾಲಿನ ಪುಡಿ ಕೊಡಲಾಗುತಿತ್ತು. ಈಗ ಅದು ಸ್ಥಗಿತಗೊಂಡಿದೆ. ಹಾಲು ಪುಡಿ, ಬೆಣ್ಣೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಬಂದಿದ್ದು, ಉತ್ತಮ ಬೆಲೆ ಸಿಗುತ್ತಿದೆ ಎಂದು ಹೇಳಿದರು.

ಮೂರು ತಿಂಗಳು ಬಾಕಿ

ರಾಜ್ಯ ಸರ್ಕಾರ ಲೀಟರ್ ಹಾಲಿಗೆ ₹5 ಪ್ರೋತ್ಸಾಹ ಧನ ನೀಡುತ್ತಿದ್ದು, ಕಳೆದ ಜನವರಿಯಿಂದ ಹಣ ಬಿಡುಗಡೆ ಮಾಡಿಲ್ಲ. ಮಾರ್ಚ್ ವೇಳೆಗೆ ಸುಮಾರು ₹25 ಕೋಟಿ ನೀಡಬೇಕಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.