
ಹುಳಿಯಾರು: ಹೋಬಳಿ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮೊದಲಿನಿಂದಲೂ ಸಿರಿಧಾನ್ಯಗಳ ಕಣಜ. ವೈವಿಧ್ಯಮಯ ಸಿರಿಧಾನ್ಯಗಳ ನಡುವೆ ರಾಗಿ ಪ್ರಮುಖ ವಾಣಿಜ್ಯ ಬೆಳೆಯಾಗಿ, ಉಳಿದವು ನೇಪತ್ಯಕ್ಕೆ ಸರಿಯುತ್ತಿವೆ.
ಕೊರಲೆ, ಹಾರಕ, ಸಾಮೆ, ನವಣೆ, ಊದಲು, ರಾಗಿ ಇವುಗಳು ಸಿರಿಧಾನ್ಯಗಳ ಪಟ್ಟಿಗೆ ಸೇರಿವೆ. ಪುರಾತನ ಕಾಲದಿಂದಲೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಾದ್ಯಂತ ಸಿರಿಧಾನ್ಯಗಳದ್ದೇ ಕಾರುಬಾರು. ರೈತರು ಎಲ್ಲವನ್ನೂ ತಮಗೆ ಬೇಕಾಗುವಷ್ಟು ಬೆಳೆದು ಹೆಚ್ಚಿನದ್ದನು ಮಾರಾಟ ಮಾಡುತ್ತಿದ್ದರು. ಕ್ರಮೇಣ ಸಿರಿಧಾನ್ಯ ಬಳಸುವವರ ಸಂಖ್ಯೆ ಕಡಿಮೆಯಾಗಿ ಬೆಲೆಯೂ ಇಳಿಕೆಯಾದ ಕಾರಣ ಕೆಲವು ಸಿರಿಧಾನ್ಯ ಬೆಳೆಗಳು ಕಾಣೆಯಾದವು.
ಇತ್ತೀಚಿನ ಸಿರಿಧಾನ್ಯಗಳಿಗೆ ಮತ್ತೆ ಬೇಡಿಕೆ ಬಂದಿತ್ತು. ನವಣೆ ಮತ್ತು ಸಾಮೆಗೆ ಬೇಡಿಕೆ ಹೆಚ್ಚಾದಂತೆ ಬಿತ್ತನೆ ಹೆಚ್ಚಿ ರೈತರಿಗೆ ಲಾಭವೂ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಪೈಕಿ ರಾಗಿ ಹೊರತುಪಡಿಸಿ ಉಳಿದವುಗಳ ಬಿತ್ತನೆ ಕುಂಠಿತಗೊಂಡಿದೆ. ತಾಲ್ಲೂಕಿನಾದ್ಯಂತ ಮೊದಲು ರಾಗಿ ಜತೆ ಹಾರಕ, ನವಣೆ, ಸಾಮೆ, ಊದಲು ಬಿತ್ತನೆ ಮಾಡುತ್ತಿದ್ದರು. ಬಿತ್ತನೆ ನಂತರ ಒಮ್ಮೆ ಎಡೆ ಹೊಡೆದರೆ ಮತ್ತೆ ಕೊಯ್ಲಿನವರೆಗೆ ಯಾವುದೇ ಕೆಲಸ ಹಾಗೂ ಖರ್ಚು ಈ ಬೆಳೆಗಳಿಗೆ ತಗುಲುತ್ತಿರಲಿಲ್ಲ. ಕಳೆದ ಐದಾರು ವರ್ಷಗಳಿಂದ ಅಡಿಕೆ ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟ ಕಾರಣ ಸಿರಿಧಾನ್ಯ ಬಿತ್ತನೆ ಸಂಪೂರ್ಣ ಕುಸಿತ ಕಂಡಿದೆ.
ಬೆಂಬಲ ಬೆಲೆಯಿಂದ ರಾಗಿಗೆ ಶುಕ್ರದೆಸೆ: ಹಲವು ತೊಡರುಗಳ ನಡುವೆಯೂ ಒಂದಿಷ್ಟು ಬಿತ್ತನೆ ಕಾಣುತ್ತಿದ್ದ ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆಯಿಂದ ಬಿತ್ತನೆ ಮತ್ತಷ್ಟು ಕುಸಿಯುವಂತಾಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹4,256 ಬೆಲೆಯಿತ್ತು. ಈ ಬಾರಿ ₹4,986 ನಿಗದಿ ಪಡಿಸಿರುವುದು ಕೂಡ ರಾಗಿ ಬಿತ್ತನೆ ಹೆಚ್ಚಳಕ್ಕೆ ಕಾರಣವಾಗಿತ್ತು.
ತಾಲ್ಲೂಕಿನಲ್ಲಿ ರೈತರ ಒಣ ತರಕಾರಿಯೇ ಆಗಿದ್ದ ಹುರುಳಿಕಾಳು ಕೂಡ ಬಿತ್ತನೆಯಲ್ಲಿ ಕುಸಿತ ಕಂಡಿದೆ. ಸಿರಿಧಾನ್ಯಗಳ ಬೀಡಿನಲ್ಲೀಗ ಕೆಲವೇ ಕೆಲವು ಬೆಳೆಗಳು ಮುನ್ನಲೆಗೆ ಬಂದಿದ್ದು, ಏಕ ಬೆಳೆ ಪದ್ಧತಿಯತ್ತ ರೈತರು ಸಾಗುತ್ತಿದ್ದಾರೆ.
ಏಕಬೆಳೆಯತ್ತ ಒಲವು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಮೊದಲು ರಾಗಿ ನವಣೆ ಸಾಮೆ ಕೊರಲೆ ಸೇರಿದಂತೆ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದರು. ಇವುಗಳ ಜತೆ ಅಕ್ಕಡಿ ಸಾಲಿನಲ್ಲಿ ಹುರುಳಿ ಹುಚ್ಚೆಳ್ಳು ಸಜ್ಜೆ ಅಲಸಂದೆ ಸಾಸಿವೆ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಕೇವಲ ಬೆಲೆಯಿರುವ ಬೆಳೆ ಬೆಳೆದು ಏಕ ಬೆಳೆ ಪದ್ಧತಿಗೆ ಮಾರು ಹೋಗುತ್ತಿದ್ದಾರೆ. ಎನ್.ಇಂದಿರಮ್ಮ ಸಿರಿಧಾನ್ಯ ಸಂಸ್ಕರಣಾ ಘಟಕ ಕಂದಿಕೆರೆ