ADVERTISEMENT

ರಸ್ತೆಯಲ್ಲೇ ನಿಂತ ಟ್ರ್ಯಾಕ್ಟರ್‌ಗಳು

ರಾಗಿ ಖರೀದಿ ವಿಳಂಬ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 7:04 IST
Last Updated 8 ಫೆಬ್ರುವರಿ 2023, 7:04 IST
ತುರುವೇಕೆರೆಯ ಖರೀದಿ ಕೇಂದ್ರದ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ರಾಗಿ ಚೀಲಗಳನ್ನು ತುಂಬಿರುವ ಟ್ರ್ಯಾಕ್ಟರ್‌ಗಳು
ತುರುವೇಕೆರೆಯ ಖರೀದಿ ಕೇಂದ್ರದ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ರಾಗಿ ಚೀಲಗಳನ್ನು ತುಂಬಿರುವ ಟ್ರ್ಯಾಕ್ಟರ್‌ಗಳು   

ತುರುವೇಕೆರೆ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ನಫೆಡ್‍ ಕೇಂದ್ರದಲ್ಲಿ ಮಾರಾಟ ಮಾಡಲು ತಾಲ್ಲೂಕಿನ ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಬಂದಿದ್ದು, ಕಳೆದ ಮೂರು ದಿನಗಳಿಂದ ರಸ್ತೆಯಲ್ಲಿಯೇ ಕಾಯುವಂತಾಗಿದೆ.

ಕೃಷಿ ಮಾರುಕಟ್ಟೆ ಸಮುಚ್ಚಯದಿಂದ ಬಸ್‍ ಡಿಪೊ ತನಕ ರಸ್ತೆ ಬದಿಯ ಎಡಭಾಗದಲ್ಲಿ ಸಾಕಷ್ಟು ರೈತರ ರಾಗಿ ಚೀಲಗಳನ್ನು ತುಂಬಿರುವ ಟ್ರ್ಯಾಕ್ಟರ್‌ಗಳು ನಿಂತಿವೆ.

ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿ ವಾರ ಕಳೆದಿದೆ. ನೋಂದಾಯಿತ ರೈತರು ತಮ್ಮ ರಾಗಿ ಚೀಲಗಳನ್ನು ನಫೆಡ್‍ ಕೇಂದ್ರಕ್ಕೆ ಬಿಡುವ ದಿನಾಂಕದ ಟೋಕನ್‍ ನೀಡಲಾಗಿದೆ. ಅದರಂತೆ ದಿನಕ್ಕೆ ಕೇವಲ 60 ಚೀಲಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಮೇಕೆ ಸಂತೆ ಮತ್ತು ಕೊಬ್ಬರಿ ಸಂತೆ ಇದ್ದುದರಿಂದ ಎಪಿಎಂಸಿಯೊಳಗೆ ಟ್ರ್ಯಾಕ್ಟರ್‌ ನಿಲ್ಲಿಸಲು ಅನುಮತಿ ನೀಡಿಲ್ಲ ಎಂದು ರೈತರು ಆರೋಪಿಸಿದರು.

ADVERTISEMENT

‘ದೂರದ ಊರುಗಳಿಂದ ಬಂದ ರೈತರು ಅಧಿಕಾರಿಗಳು ಕರೆದಾಗ ರಾಗಿ ನೀಡಲು ಕಾಯುತ್ತಿದ್ದಾರೆ. ಈಗ ಜನರು ಜಾಸ್ತಿ ಇದ್ದಾರೆ. ಪುನಃ ಊರುಗಳಿಗೆ ತೆರಳದೆ ಹಗಲು, ರಾತ್ರಿ ಎನ್ನದೆ ರಾಗಿಯನ್ನು ಕಾಯುವಂತಾಗಿದೆ’ ಎಂಬುದು ರೈತರ ದೂರು.

‘ಅಧಿಕಾರಿಗಳು ಹೆಚ್ಚಿನ ಕೌಂಟರ್‌ ತೆರೆಯಬೇಕು. ಅಲ್ಲದೇ, ರಾಗಿ ಖರೀದಿಸುವಲ್ಲಿಯೂ ವಿಳಂಬವಾಗುತ್ತಿದೆ. ಭಾಗಶಃ ರೈತರು ರಾಗಿ ಕೇಂದ್ರಕ್ಕೆ ರಾಗಿ ತರಲು ಟ್ರ್ಯಾಕ್ಟರ್‌ ಮತ್ತು ಚಾಲಕರಿಗೆ ಬಾಡಿಗೆ ಹಣ ನೀಡಿದ್ದೇವೆ. ಅಧಿಕಾರಿಗಳು ಯಾವಾಗ ಅನುಮತಿ ನೀಡುತ್ತಾರೆಂದು ಕಾಯುತ್ತಿದ್ದೇವೆ’ ಎಂದು ರೈತ ರವಿಕುಮಾರ್ ತಿಳಿಸಿದರು.

‘ಈಗಾಗಲೇ, 13,880 ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾ
ಯಿಸಿದ್ದಾರೆ. ಸದ್ಯಕ್ಕೆ 1,100 ರೈತರ ರಾಗಿ ಖರೀದಿ ಮಾಡಲಾಗಿದೆ. ಮಾರ್ಚ್‌ ಅಂತ್ಯದೊಳಗೆ ನೋಂದಾಯಿತ ಎಲ್ಲಾ ರೈತರಿಂದ ರಾಗಿ ಖರೀದಿಸಲಾಗುವುದು’ ಎಂದು ಖರೀದಿ ಕೇಂದ್ರದ ಅಧಿಕಾರಿ ಬಿ. ರವಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.