ADVERTISEMENT

ಗಣಿ ಸ್ಫೋಟ: ಸಂಜೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 1:03 IST
Last Updated 5 ಆಗಸ್ಟ್ 2021, 1:03 IST

ತುಮಕೂರು: ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುವವರು ಸಂಜೆ 6ರಿಂದ 7 ಗಂಟೆ ಸಮಯದಲ್ಲಿ ಮಾತ್ರ ಬಂಡೆ ಸ್ಫೋಟಿಸಬೇಕು. ಉಳಿದ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ಫೋಟಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾ ಟಾಸ್ಕ್ ಫೋರ್ಸ್ (ಗಣಿ) ಮತ್ತು ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ, ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಅಕ್ರಮ ಗಣಿಗಾರಿಕೆಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮರಳು ಮಾಫಿಯಾ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅಕ್ರಮ ಮರಳುಗಾರಿಕೆ ನಡೆಯದಂತೆ ಕ್ರಮವಹಿಸಬೇಕು. ನಿಯಮಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು. ನೀತಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದ ರೊಂದಿಗೆ ಯಾವುದೇ ಸಮಸ್ಯೆ, ಅವಘಡ ಸಂಭವಿಸದಂತೆ ನೋಡಿಕೊಳ್ಳು ವಂತೆ ತಿಳಿಸಿದರು.

ADVERTISEMENT

ಮರಳು ಮಾಫಿಯಾ ಕಂಡು ಬಂದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತಹಶೀಲ್ದಾರ್, ಪಿಡಿಒಗೆ ಅಥವಾ ಪೊಲೀಸ್ ಠಾಣೆಗೆ ದೂರು ನೀಡಬೇಕು. ಸಾರ್ವಜನಿಕರಿಂದ ದೂರು ಬಂದ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಅನಧಿಕೃತ ಗಣಿಗಾರಿಕೆ ಹಾಗೂ ವಶಪಡಿಸಿಕೊಂಡಿರುವ ಉಪ ಖನಿಜವನ್ನು ಹರಾಜು ಮೂಲಕ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್, ‘ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯುವುದು ಕಂಡುಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು
ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ವಿದ್ಯಾ
ಕುಮಾರಿ, ‘ವನ್ಯಜೀವಿ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಮೀರಿ ಗಣಿಗಾರಿಕೆ ನಡೆಸಲು ಅವ
ಕಾಶ ಕೊಡಬಾರದು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ‘ಗಣಿಗಾರಿಕೆ ಸಂಬಂಧ ಜಿಲ್ಲೆಗೆ ಯಾವುದೇ ಸಲಕರಣೆಗಳು ಬಂದರೂ ಜಿಲ್ಲಾಡಳಿತ, ಪೊಲೀಸ್, ಜಿಲ್ಲಾ ಪಂಚಾಯಿತಿ ಗಮನಕ್ಕೆ ತರಬೇಕು’ ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಅಜಯ್, ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ರಮೇಶ್, ಪಾಲಿಕೆ ಆಯುಕ್ತೆ ರೇಣುಕಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.