ತುಮಕೂರು: ಮಕ್ಕಳ ಅಪಹರಣ, ನಾಪತ್ತೆ ಪ್ರಕರಣಗಳು ಪ್ರತಿ ವರ್ಷ ಹೆಚ್ಚುತ್ತಿದ್ದು, ಪೋಷಕರಲ್ಲಿ ದಿಗಿಲು ಹುಟ್ಟಿಸಿದೆ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ 682 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ ಇದುವರೆಗೆ 44 ಮಂದಿಯ ಸುಳಿವೇ ಸಿಕ್ಕಿಲ್ಲ.
ಅಪಹರಣವಾದ ಮಕ್ಕಳ ಪೈಕಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 2020–2025ರ ಜುಲೈ ಅಂತ್ಯಕ್ಕೆ 133 ಬಾಲಕರು, 549 ಬಾಲಕಿಯರು ನಾಪತ್ತೆಯಾಗಿದ್ದಾರೆ. ಇದರಲ್ಲಿ ಕ್ರಮವಾಗಿ 126 ಮತ್ತು 512 ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಮಾಜಿಕ ಜಾಲ ತಾಣದ ಬಳಕೆ ಹೆಚ್ಚಾದ ನಂತರ ಕಾಣೆಯಾಗುವ ಮಕ್ಕಳ ಸಂಖ್ಯೆ ಏರು ಗತಿಯಲ್ಲಿ ಸಾಗಿದೆ.
ಮಕ್ಕಳ ಕಾಣೆ ಪ್ರಕರಣಗಳಲ್ಲಿ ಜಿಲ್ಲೆಯು ಬೆಂಗಳೂರಿನ ನಂತರದ ಸ್ಥಾನ ಪಡೆದಿದೆ. ಅಪಹರಣವಾದ ಬಾಲಕಿಯರು ಪತ್ತೆಯಾದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅತ್ಯಾಚಾರ ನಡೆದಿದ್ದು ದೃಢಪಟ್ಟರೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ದೌರ್ಜನ್ಯ ಎಸಗಿದವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುತ್ತದೆ.
ಶೇ 90ರಷ್ಟು ಪ್ರಕರಣಗಳಲ್ಲಿ ಹದಿಹರೆಯದವರು ಪ್ರೀತಿ, ಪ್ರೇಮದ ಬಲೆಗೆ ಸಿಲುಕಿ ಮನೆ ಬಿಟ್ಟು ಹೋಗುತ್ತಿದ್ದಾರೆ. ಉಳಿದ ಶೇ 10ರಷ್ಟು ಮಕ್ಕಳು ಕೌಟುಂಬಿಕ ವಿಘಟನೆ, ತಂದೆ–ತಾಯಿ ಜಗಳ, ಪೋಷಕರ ವಿಚ್ಛೇದನದಿಂದ ನೊಂದು ಮನೆ ತೊರೆಯುತ್ತಿದ್ದಾರೆ. ಇಂತಹವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಮತ್ತೆ ಮನೆಗೆ ಸೇರಿಸುವ ಕೆಲಸವನ್ನು ಪೊಲೀಸರು, ಮಕ್ಕಳು ರಕ್ಷಣಾ ಘಟಕದ ಅಧಿಕಾರಿಗಳು ಮಾಡುತ್ತಿದ್ದಾರೆ. ಆದರೆ ನಿರೀಕ್ಷಿಸಿದಷ್ಟು ಯಶಸ್ಸು ಕಾಣುತ್ತಿಲ್ಲ.
ಕಾಣೆಯಾದವರನ್ನು ಸಿ.ಸಿ ಟಿ.ವಿ ಕ್ಯಾಮೆರಾಗಳ ನೆರವಿನಿಂದ ಪತ್ತೆ ಹಚ್ಚಲಾಗುತ್ತಿದೆ. ಮೊಬೈಲ್ ನೆಟ್‌ವರ್ಕ್ ಸಹ ಮಕ್ಕಳ ಸುಳಿವು ನೀಡುತ್ತದೆ. ಪ್ರಕರಣ ದಾಖಲಾದ 120 ದಿನಗಳ ನಂತರವೂ ಮಕ್ಕಳ ಸುಳಿವು ಸಿಗದಿದ್ದರೆ ಅಂತಹ ಪ್ರಕರಣಗಳನ್ನು ಎಎಚ್‌ಟಿಯು (ಆ್ಯಂಟಿ ಹ್ಯೂಮನ್ ಟ್ರ್ಯಾಕಿಂಗ್ ಯುನಿಟ್) ಘಟಕಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಪರಿಣಾಮಕಾರಿ ತನಿಖೆಗೆ ಇದು ಸಹಾಯವಾಗಲಿದೆ.
‘ಮಕ್ಕಳು ಬಾಲ್ಯದಲ್ಲೇ ತಪ್ಪು ತಿಳಿವಳಿಕೆಯಿಂದ ಕುಟುಂಬವನ್ನು ತ್ಯಜಿಸಿ ಹೋಗುತ್ತಿದ್ದಾರೆ. ಮನೆಯಲ್ಲಿ ಹೊಂದಾಣಿಕೆ, ಪ್ರೀತಿ, ವಾತ್ಸಲ್ಯ ಸಿಗದವರು ಸದಾ ಬಾಗಿಲಿನಿಂದ ಆಚೆ ಇಣುಕು ನೋಡುತ್ತಾರೆ. ಮತ್ತೊಬ್ಬರ ಸಾಂಗತ್ಯ ಬಯಸುತ್ತಾರೆ. ಇನ್‌ಸ್ಟಾಗ್ರಾಮ್ ಸೇರಿ ಇತರೆ ಸಾಮಾಜಿಕ ಜಾಲ ತಾಣಗಳು ಮಕ್ಕಳನ್ನು ತಪ್ಪು ದಾರಿಗೆ ಎಳೆಯುತ್ತಿವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದರು.
ಕಾಣೆಯಾದವರಲ್ಲಿ ಬಾಲಕಿಯರೇ ಅಧಿಕ ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣ ಪತ್ತೆ ಕಾರ್ಯವೂ ವೇಗ
ಮಕ್ಕಳು ಕಾಣೆಯಾದ ಕೂಡಲೇ ಪ್ರಕರಣ ದಾಖಲಿಸಿ ರಕ್ಷಣೆಗೆ ಕ್ರಮ ವಹಿಸಲಾಗುತ್ತದೆ. ಪ್ರತಿ ತಿಂಗಳು ಪೊಲೀಸರ ಜತೆ ಸಭೆ ನಡೆಸಲಾಗುತ್ತಿದೆಆರ್.ಜಿ.ಪವಿತ್ರಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.