ADVERTISEMENT

ಕೊಲೆಯಾದ ಮಹಿಳೆ ಗುರುತು ಪತ್ತೆ

ಕಾಣೆಯಾದ ಮಹಿಳೆ ಶವವಾಗಿ ಪತ್ತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 5:25 IST
Last Updated 9 ಆಗಸ್ಟ್ 2025, 5:25 IST

ಕೊರಟಗೆರೆ: ತಾಲ್ಲೂಕಿನ ಚಿಂಪುಗಾನಹಳ್ಳಿ ಬಳಿ ಗುರುವಾರ ಕೊಲೆಯಾದ ಮಹಿಳೆ ಗುರುತು ಪತ್ತೆಯಾಗಿದ್ದು, ಬೆಳ್ಳಾವಿಯ ಲಕ್ಷ್ಮಿದೇವಮ್ಮ (42) ಎಂಬುದು ಖಚಿತವಾಗಿದೆ. ಹತ್ಯೆ ಮಾಡಿ ತಾಲ್ಲೂಕಿನ ವಿವಿಧೆಡೆ ದೇಹದ ಭಾಗಗಳನ್ನು ತುಂಡು ತುಂಡಾಗಿ ಬಿಸಾಡಲಾಗಿತ್ತು.

ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿ, ಕೋಳಾಲ ಹೋಬಳಿ ವ್ಯಾಪ್ತಿಯ ಮಧ್ಯವೆಂಕಟಾಪುರ ಹಾಗೂ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ಬೆಂಡೋಣೆ ಗ್ರಾಮದ ಬಳಿ ದೇಹದ ಕೆಲ ಅಂಗಾಂಗಗಳು ಪತ್ತೆಯಾಗಿದ್ದವು. ಪೊಲೀಸರು ಗುರುವಾರ ರಾತ್ರಿ ತನಕ ಕಾರ್ಯಾಚರಣೆ ನಡೆಸಿದ್ದರು. ಸಿದ್ಧರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಉಡುಪು ಪತ್ತೆಯಾಗಿದ್ದವು.

ಪತ್ತೆ ಹೇಗೆ?: ಕೈ ಮೇಲಿನ ಅಚ್ಚೆ, ಮುಖದ ಮೇಲಿನ ಕೆಲವು ಗುರುತುಗಳು ಹಾಗೂ ಉಡುಪುಗಳ ಆಧಾರದ ಮೇಲೆ ಮಾಹಿತಿ ಕಲೆ ಹಾಕಲಾಗಿದೆ. ನಂತರ ಕೊಲೆಯಾದ ಮಹಿಳೆ ಲಕ್ಷ್ಮಿದೇವಮ್ಮ ಎಂಬುದು ದೃಢಪಟ್ಟಿದೆ. ಕುಟುಂಬದವರು ಖಚಿತಪಡಿಸಿದ್ದಾರೆ.

ADVERTISEMENT

ನಾಪತ್ತೆ ದೂರು: ‘ಮಗಳನ್ನು ನೋಡಲು ಹೋದ ಹೆಂಡತಿ ವಾಪಸ್‌ ಬಂದಿಲ್ಲ. ಸಂಬಂಧಿಕರ ಮನೆಯಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ’ ಎಂದು ಲಕ್ಷ್ಮಿದೇವಮ್ಮ ಗಂಡ ಬಸವರಾಜು ಬೆಳ್ಳಾವಿ ಠಾಣೆಯಲ್ಲಿ ಆ. 4ರಂದೇ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಾಗಿತ್ತು.

ಲಕ್ಷ್ಮಿದೇವಮ್ಮ ಅವರಿಗೆ ಮೂರು ಜನ ಮಕ್ಕಳಿದ್ದು, ಮಗಳನ್ನು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸಿದ್ದಲಿಂಗಪಾಳ್ಯದ ರಾಮಚಂದ್ರ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಆ. 3ರಂದು ಲಕ್ಷ್ಮಿದೇವಮ್ಮ ಮಗಳನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು. ರಾತ್ರಿಯಾದರೂ ವಾಪಸ್‌ ಮನೆಗೆ ಬಂದಿರಲಿಲ್ಲ.

‘ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೊಲೆ ಮಾಡಿರುವ ವ್ಯಕ್ತಿ ಯಾರು ಎಂಬುವುದರ ಬಗ್ಗೆಯೂ ಸ್ಪಷ್ಟ ಮಾಹಿತಿ ದೊರೆತಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗಾರನ ಪತ್ತೆಗೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.