ADVERTISEMENT

ಶಿರಾ: ಸ್ಥಳೀಯರಿಗೆ ಉದ್ಯೋಗ ನೀಡಲು ಶಾಸಕ ಟಿ.ಬಿ‌.ಜಯಚಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:19 IST
Last Updated 13 ಆಗಸ್ಟ್ 2024, 14:19 IST
ಶಿರಾದ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಖಾನೆಗಳ ಮಾಲೀಕರು, ಮುಖ್ಯಸ್ಥರ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದರು
ಶಿರಾದ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಖಾನೆಗಳ ಮಾಲೀಕರು, ಮುಖ್ಯಸ್ಥರ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದರು    

ಶಿರಾ: ತಾಲ್ಲೂಕಿನ ಯುವಕ, ಯುವತಿಯರಿಗೆ ಸ್ಥಳೀಯವಾಗಿ ಉದ್ಯೋಗ ದೊರಯಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ವಸಾಹತು ಸ್ಥಾಪಿಸಿದ್ದು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವಂತೆ ಶಾಸಕ ಟಿ.ಬಿ‌.ಜಯಚಂದ್ರ ಸೂಚಿಸಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಶಿರಾ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ಇತರೆಡೆ ಹೋಗದೆ ಸ್ಥಳೀಯವಾಗಿಯೇ ಉದ್ಯೋಗ ಪಡೆಯಲಿ ಎನ್ನುವ ಉದ್ದೇಶ ಈಡೇರಬೇಕು. ಆದ್ದರಿಂದ ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಾಗಿದೆ. ಸ್ಥಳೀಯವಾಗಿ ಪ್ರತಿಭಾವಂತರಿದ್ದಾರೆ ಅವರಿಗೆ ಸರಿಯಾದ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾವಕಾಶ ನೀಡಿ ಎಂದರು.

ADVERTISEMENT

ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಶೀಘ್ರವಾಗಿ ಶಿರಾದಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದರು.

ಶಿರಾ ಕೈಗಾರಿಕಾ ವಸಹತು ಪ್ರದೇಶದಲ್ಲಿ ಈಗಾಗಲೇ ನಾಲ್ಕು ಕೊಳವೆ ಬಾವಿ ಕೊರೆಸಲಾಗಿದೆ. ಆದರೂ ನೀರಿನ ಕೊರತೆ ಉಂಟಾಗುತ್ತಿದೆ. ಹೇಮಾವತಿ ನೀರನ್ನು ಕೈಗಾರಿಕಾ ವಸಹತು ಪ್ರದೇಶಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೆಐಎಡಿಬಿ ಅಧಿಕಾರಿಗಳು ಮನವಿ ಮಾಡಿದರು.

ಕೈಗಾರಿಕಾ ವಸಹತು ಪ್ರದೇಶಕ್ಕೆ ಹತ್ತಿರವಿರುವ ಗುಮ್ಮನಹಳ್ಳಿ ಕೆರೆಯಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಟಿ.ಬಿ.ಜಯಚಂದ್ರ ನೀಡಿದರು.

ತಹಶೀಲ್ದಾರ್ ಡಾ.ದತ್ತಾತ್ರೆಯ ಜೆ.ಗಾದಾ, ತಾ.ಪಂ. ಇಒ ಹರೀಶ್, ಪೌರಾಯುಕ್ತ ರುದ್ರೇಶ್, ಕೆಐಎಡಿಬಿ ಅಧಿಕಾರಿಗಳು ಹಾಗೂ ವಿವಿಧ ಕಾರ್ಖಾನೆ ಮಾಲೀಕರು, ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸ್ಕಿಲ್ ಯುನಿವರ್ಸಿಟಿ: ಶೀಘ್ರ ಕ್ರಮ
ಎಸ್ಎಸ್‌ಎಲ್‌ಸಿ ಪಿಯು ಪದವಿ ಸೇರಿದಂತೆ ಇತರೆ ವಿದ್ಯಾಭ್ಯಾಸ ಮಾಡಿದ ಯುವಕ ಯುವತಿಯರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ಪಡೆಯಲು ಶಿರಾದಲ್ಲಿ ಸ್ಕಿಲ್ ಯುನಿವರ್ಸಿಟಿ ಸ್ಥಾಪಿಸಲು ಉದ್ದೇಶಿಸಿದ್ದು ತರಬೇತಿ ನೀಡಲು ಮುಂಬೈನ ಒಂದು ಯುನಿವರ್ಸಿಟಿ ಮುಂದೆ ಬಂದಿದೆ. ಅದಕ್ಕಾಗಿ 20 ಎಕರೆ ಜಮೀನು ಕೇಳಿದ್ದಾರೆ. ಶೀಘ್ರ ಈ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.