ತುಮಕೂರು: ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಸರ್ಕಾರ ‘ಸಂಚಾರ ಆರೋಗ್ಯ ಕ್ಲಿನಿಕ್’ ಯೋಜನೆ ಜಾರಿಗೊಳಿಸಿದೆ. ಯೋಜನೆಯಡಿ ಜಿಲ್ಲೆಗೆ ಬಂದ 2 ವಾಹನಗಳು ಕಳೆದ ಹಲವು ದಿನಗಳಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ನಿಂತಿವೆ.
ಕಾರ್ಮಿಕ ಇಲಾಖೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ‘ಸಂಚಾರ ಆರೋಗ್ಯ ಘಟಕ’ಕ್ಕಾಗಿ ಎರಡು ವಾಹನ ಖರೀದಿಸಲಾಗಿದೆ. ಪ್ರತಿ ವಾಹನಕ್ಕೆ ₹4 ಕೋಟಿಯಂತೆ ಒಟ್ಟು ₹8 ಕೋಟಿ ವ್ಯಯಿಸಲಾಗಿದೆ. ಆದರೆ ಈವರೆಗೂ ವಾಹನ ಬಳಸಲು ಸಾಧ್ಯವಾಗಿಲ್ಲ. ವಾಹನಗಳ ನಿಲುಗಡೆಗೂ ಸುಸಜ್ಜಿತ ಸ್ಥಳ ನಿಗದಿ ಪಡಿಸಿಲ್ಲ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದು, ಬಿಸಿಲಿಗೆ ಒಣಗಿ, ಮಳೆಗೆ ನೆನೆದು ಹಾಳಾಗುತ್ತಿದೆ.
ವಾಹನಗಳಲ್ಲಿ ಚಿಕಿತ್ಸೆಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿದ್ದು, ಜಿಪಿಎಸ್ ಅಳವಡಿಸಲಾಗಿದೆ. 25 ವೈದ್ಯಕೀಯ ಉಪಕರಣ, 5 ಪ್ರಯೋಗಾಲಯದ ಉಪಕರಣ, 37 ವಿಧದ ವೈದ್ಯಕೀಯ ಬಳಕೆ ವಸ್ತುಗಳು ಇವೆ. ವೈದ್ಯರು, ಶುಶ್ರೂಷಕಿ, ಫಾರ್ಮಾಸಿಸ್ಟ್, ಪ್ರಯೋಗಾಲಯ ತಂತ್ರಜ್ಞ, ಚಾಲಕ ಸೇರಿದಂತೆ 6 ಜನರ ತಂಡ ಕೆಲಸ ಮಾಡಲಿದೆ.
ಸಂಚಾರ ಆರೋಗ್ಯ ಕ್ಲಿನಿಕ್‌ನಲ್ಲಿ ಮಧುಮೇಹ, ರಕ್ತದೊತ್ತಡ, ಕಣ್ಣಿನ ಪರೀಕ್ಷೆ, ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಔಷಧಿ ವಿತರಿಸಲಾಗುತ್ತದೆ. ವೈದ್ಯರು ಕಾರ್ಮಿಕರ ಜತೆಗೆ ಸಮಾಲೋಚನೆ ನಡೆಸುತ್ತಾರೆ. ಆರೋಗ್ಯ ರಕ್ಷಣೆ ಕುರಿತು ಸಲಹೆ, ಮಾರ್ಗದರ್ಶನ ನೀಡುತ್ತಾರೆ.
ಸಚಿವರು ಚಾಲನೆ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮೇ 17ರಂದು ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದರು. ನಗರ ಹೊರವಲಯದ ಗಂಗಾಧರಯ್ಯ ಸ್ಮಾರಕ ಭವನದಲ್ಲಿ ವಾಹನಗಳಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದ್ದು, ಅಲ್ಲಿಂದ ಮುಂದೆ ಕದಲಿಲ್ಲ. ಈಗ ಜಿಲ್ಲಾಧಿಕಾರಿ ಕಚೇರಿಯೇ ಕಾಯಂ ವಾಸಸ್ಥಾನವಾಗಿದೆ.
ಕಾರ್ಮಿಕ ಇಲಾಖೆ ಅಂಕಿ–ಅಂಶ ಪ್ರಕಾರ ತುಮಕೂರು ಉಪವಿಭಾಗ ವ್ಯಾಪ್ತಿಯಲ್ಲಿ 95 ಸಾವಿರ ಕಟ್ಟಡ ಕಾರ್ಮಿಕರಿದ್ದಾರೆ. ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ವಾಹನ ಖರೀದಿಸಲಾಗಿದೆ. ಜಿಲ್ಲೆಗೆ ಬಂದ ದಿನದಿಂದ ಇದುವರೆಗೆ ಒಬ್ಬ ಕಾರ್ಮಿಕರಿಗೂ ಪ್ರಯೋಜನವಾಗಿಲ್ಲ.
‘ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕಾದ ವಾಹನಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ವಲ್ಪ ದಿನಕ್ಕೆ ಗುಜರಿ ಸೇರುವ ಹಂತ ತಲುಪುತ್ತವೆ. ಕೂಡಲೇ ಬಳಕೆಗೆ ನೀಡಲು ಕ್ರಮ ಕೈಗೊಳ್ಳಬೇಕು. ವಾಹನ ನಿಲುಗಡೆಗೆ ಸಮರ್ಪಕ ಜಾಗ ಗುರುತಿಸಬೇಕು’ ಎಂಬುದು ಕಾರ್ಮಿಕರ ಒತ್ತಾಯವಾಗಿದೆ.
ಹೆಚ್ಚಿನ ಚಿಕಿತ್ಸೆ ಸಿಗಲ್ಲ
ಸರ್ಕಾರ ಕಾರ್ಮಿಕರಿಗೆ ಬೇಕಾದ ಸೌಲಭ್ಯ ಕೊಡಲು ತಯಾರಿಲ್ಲ. ತುಂಬಾ ಜನರಿಗೆ ಸಂಚಾರ ಘಟಕದ ಮಾಹಿತಿಯೇ ಇಲ್ಲ ಎನ್ನುತ್ತಾರೆ ಸಿಐಟಿಯು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಉಮೇಶ್. ಘಟಕದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಗ್ಯ ಪರಿಶೀಲಿಸಿ ಸುಮ್ಮನಾಗುತ್ತಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿಲ್ಲ. ಘಟಕದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.