ADVERTISEMENT

ಮೋದಿ ಜನ್ಮ ದಿನ: ಸ್ವಚ್ಛತಾ ಶಿಬಿರ, ಆರೋಗ್ಯ ತಪಾಸಣೆ

5 ಗ್ರಾ.ಪಂ ದತ್ತು; ಗುರುಸಿದ್ದರಾಮೇಶ್ವರ ಭವನಕ್ಕೆ ₹60 ಲಕ್ಷ ನೆರವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 2:41 IST
Last Updated 18 ಸೆಪ್ಟೆಂಬರ್ 2024, 2:41 IST
ತುಮಕೂರಿನ ಬೆಳಗುಂಬದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಚರಂಡಿ ಸ್ವಚ್ಛಗೊಳಿಸಿದರು. ಶಾಸಕ ಬಿ.ಸುರೇಶ್‌ಗೌಡ, ಜಿ.ಪಂ ಸಿಇಒ ಜಿ.ಪ್ರಭು ಇತರರು ಪಾಲ್ಗೊಂಡಿದ್ದರು
ತುಮಕೂರಿನ ಬೆಳಗುಂಬದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಚರಂಡಿ ಸ್ವಚ್ಛಗೊಳಿಸಿದರು. ಶಾಸಕ ಬಿ.ಸುರೇಶ್‌ಗೌಡ, ಜಿ.ಪಂ ಸಿಇಒ ಜಿ.ಪ್ರಭು ಇತರರು ಪಾಲ್ಗೊಂಡಿದ್ದರು   

ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ವಿವಿಧ ಇಲಾಖೆಗಳು, ಬಿಜೆಪಿ ಹಾಗೂ ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ಹೊರ ವಲಯದ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಸೋಮಣ್ಣ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ‘ಬೆಳಗುಂಬ, ಸ್ವಾಂದೇನಹಳ್ಳಿ, ಗೂಳೂರು, ಹೆತ್ತೇನಹಳ್ಳಿ, ಹೆಗ್ಗೆರೆ ಪಂಚಾಯಿತಿಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಸಲುವಾಗಿ ದತ್ತು ತೆಗೆದುಕೊಳ್ಳಲಾಗುವುದು. ಬೆಳಗುಂಬ ಗುರುಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹10 ಲಕ್ಷ ನೆರವು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹50 ಲಕ್ಷ ಅನುದಾನ ನೀಡಲಾಗುವುದು’ ಎಂದು ಪ್ರಕಟಿಸಿದರು.

ADVERTISEMENT

ಶಾಸಕ ಬಿ.ಸುರೇಶ್‍ಗೌಡ, ‘ಸೋಮಣ್ಣ ರೈಲ್ವೆ ಸಚಿವರಾದ ಕೇವಲ 3 ತಿಂಗಳಲ್ಲಿ ಕ್ರಾಂತಿ ಮಾಡಿದ್ದಾರೆ. ಶರವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲವಾಗಿದ್ದು, ಕೇಂದ್ರದಿಂದ ಸಿಎಫ್‍ಆರ್ ಅನುದಾನ ಕೊಡಿಸಬೇಕು’ ಎಂದು ಕೇಳಿಕೊಂಡರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ‘ಸ್ವಾತಂತ್ರ್ಯಕ್ಕೂ ಮಿಗಿಲಾದುದು ಸ್ವಚ್ಛತೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಹಾಗಾಗಿ ನಾವೆಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ’ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಬೆಳಗುಂಬ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ, ತಾ.ಪಂ ಮಾಜಿ ಅಧ್ಯಕ್ಷ ಗಂಗಾಂಜನೇಯ, ತಾ.ಪಂ ಇಒ ಹರ್ಷಕುಮಾರ್, ಬೆಳಗುಂಬ ಗ್ರಾ.ಪಂ ಪಿಡಿಒ ಯೋಗ ಶ್ರೀನಿವಾಸ್, ಮುಖಂಡರಾದ ಸಣ್ಣಮಸಿಯಪ್ಪ, ಕುಂಭಯ್ಯ, ಶಂಕರಣ್ಣ, ಬೆಳಗುಂಬ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಆರೋಗ್ಯ ಶಿಬಿರ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಇರುವ ಸಚಿವ ವಿ.ಸೋಮಣ್ಣ ಕಚೇರಿ ಮುಂಭಾಗ ಉಚಿತವಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ನೇತ್ರ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕನ್ನಡಕಗಳ ವಿತರಣೆ ಮಾಡಲಾಯಿತು. ವಿವಿಧೆಡೆ ಗಿಡಗಳನ್ನು ನೆಡಲಾಯಿತು.

ತುಮಕೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಚಿವ ವಿ.ಸೋಮಣ್ಣ ಶಾಸಕ ಜಿ.ಬಿ.ಜ್ಯೋತಿಗಣೇಶ್ ಡಾ.ಎಸ್.ಪರಮೇಶ್ ಮೊದಲಾದವರು ಭಾಗವಹಿಸಿದ್ದರು

ಗಣೇಶ ವಿಸರ್ಜನೆಗೆ ಅಡ್ಡಿ: ಸುಮ್ಮನೆ ಬಿಡಬಾರದು

ತುಮಕೂರು: ಗಣೇಶ ಮೂರ್ತಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲು ಅಡ್ಡಿಪಡಿಸುವವರನ್ನು ಸುಮ್ಮನೆ ಬಿಡಬಾರದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಒತ್ತಾಯಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಇಂತಹವರು ಬಿಜೆಪಿ ಸರ್ಕಾರವಿದ್ದಾಗ ಉಸಿರೆತ್ತಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ಈ ರೀತಿ ಆಗುತ್ತದೆ. 2023ರಲ್ಲೂ ಇದೇ ರೀತಿಯ ಘಟನೆಗಳು ನಡೆದಿದ್ದವು. ಈ ಮತ್ತೆ ಮರುಕಳಿಸಿದೆ. ಇಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು. ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಸ್ವತಂತ್ರವಾಗಿ ಓಡಾಡಿಕೊಂಡು ಇದ್ದಾರೆ. ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ಪಿಎಫ್‌ಐ ಕೈವಾಡ ಇದ್ದರೆ ಕೇವಲ ಎಫ್‌ಐಆರ್ ದಾಖಲಿಸಿದರೆ ಸಾಲುವುದಿಲ್ಲ. ಅಂತಹವರಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಇದನ್ನು ರಾಜ್ಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಹಾಲು ದರ: ಹಾಲಿನ ಮಾರಾಟ ದರ ಹೆಚ್ಚಳ ಮಾಡಿ ಅದನ್ನು ರೈತರಿಗೆ ನೀಡಿದರೆ ನಮ್ಮ ಅಭ್ಯಂತರವಿಲ್ಲ. ರೈತರ ಹೆಸರಿನಲ್ಲಿ ಇನ್ನೇನೋ ಮಾಡಿಕೊಂಡು ಬೆಲೆ ಏರಿಸಿ ಆ ಹಣವನ್ನು ಭಾಗ್ಯಗಳಿಗೆ ಉಪಯೋಗಿಸಿದರೆ ಸರಿಯಲ್ಲ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳಲು ಆಗುವುದಿಲ್ಲ. ಏನೋ ಒಂದು ಹೇಳುತ್ತಾರೆ. ಅದನ್ನು ಸರಿಪಡಿಸಿಕೊಳ್ಳಲು ಇನ್ನೊಂದು ಶುರುವಾಗುತ್ತದೆ. ಹಿಂದಿನಂತೆ ಸಿದ್ದರಾಮಯ್ಯ ಆಡಳಿತ ನಡೆಸುತ್ತಿಲ್ಲ. ಒಂದೂವರೆ ವರ್ಷ ಕಳೆಯುವುದರ ಒಳಗೆ ಸರ್ಕಾರ ಎಲ್ಲಿದೆ ಎಂದು ಹುಡುಕುವಂತಾಗಿದೆ. ಈಗ ಹಳೆಯ ಸಿದ್ದರಾಮಯ್ಯ ಇಲ್ಲ. ಹೊಸ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ ಎಂದು ತಿಳಿಸಿದರು.

ಹಲ್ಲೆ ಮಾಡಿದ ಶಿವಣ್ಣ

ತುಮಕೂರು: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಪ್ತ ರಕ್ಷಿತ್ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆ ನಡೆಸಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಕಚೇರಿ ಇರುವ ಪ್ರವಾಸಿ ಮಂದಿರದ ಆವರಣದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದ್ದು ಸೊಗಡು ಶಿವಣ್ಣ ಕಾಲನ್ನು ರಕ್ಷಿತ್ ತುಳಿದಿದ್ದಾರೆ. ಆಗ ಶಿವಣ್ಣ ಹಲ್ಲೆ ನಡೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಗಮನಿಸಿದ ಸೋಮಣ್ಣ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.