ADVERTISEMENT

ಕೋತಿ, ನಾಯಿ ಹಾವಳಿ ತಡೆಗೆ ಒತ್ತಾಯ

ನಗರದ 15 ನೇ ವಾರ್ಡಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಗಿರಿಜಾ ಧನಿಯಾಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 12:00 IST
Last Updated 15 ಡಿಸೆಂಬರ್ 2018, 12:00 IST
ಕಾರ್ಯಕ್ರಮದಲ್ಲಿ ಗಿರಿಜಾ ಧನಿಯಾಕುಮಾರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಗಿರಿಜಾ ಧನಿಯಾಕುಮಾರ್ ಮಾತನಾಡಿದರು   

ತುಮಕೂರು: ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಗಿರಿಜಾ ಮಾತನಾಡಿ, ಬಡಾವಣೆಯ ಸಮಸ್ಯೆಗಳನ್ನು ಅಧಿಕಾರಗಳ ಗಮನಕ್ಕೆ ತಂದರೂ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಹೊರತುಪಡಿಸಿ, ಉಳಿದಂತೆ ಬೇರೆ ಸಮಸ್ಯೆಗಳು ಬಗೆಹರಿದಿಲ್ಲ. ಹಾಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಇಲ್ಲಿನ ಸಮಸ್ಯೆಗಳನ್ನು ಗುರುತಿಸಿ, ಮುಂದಿನ ಸಭೆಯಲ್ಲಿ ಈ ಹಿಂದೆ ಜನರು ಹೆಸರಿಸಿದ್ದ ಸಮಸ್ಯೆಗಳು ಬಗೆಹರಿದಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ವಾರ್ಡಿನ ನಾಗರಿಕರು ಕೋತಿ, ನಾಯಿಗಳ ಹಾವಳಿ ತಡೆ, ಎಸ್.ಎಸ್.ಪುರಂ 15ನೇ ಕ್ರಾಸ್‌ನಲ್ಲಿ ರಸ್ತೆಗೆ ಹಂಪ್ಸ್ ಹಾಕುವುದು, ಪಾರ್ಕಿಂಗ್ ಸಮಸ್ಯೆಗೆ ಪರಿಹಾರ, ಬೀದಿ ದೀಪಗಳ ಸಮರ್ಪಕ ನಿರ್ವಹಣೆ, ರೈಲ್ವೆ ನಿಲ್ದಾಣ ರಸ್ತೆಯ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿಟ್ಟರು.

ಗಾಂಧಿನಗರ ಆಸ್ಪತ್ರೆಯ ನಗರವಾಗಿ ಪರಿವರ್ತನೆಯಾಗುತ್ತಿದೆ. ಜನನಿ ಆಸ್ಪತ್ರೆಯವರು ಕನ್ಸರ್ವೆನ್ಸಿ ಒತ್ತುವರಿ ಮಾಡಿಕೊಂಡು ಯಾವುದೇ ಅನುಮತಿ ಪಡೆಯದೆ, ಮನೆಯಲ್ಲಿ ಅಕ್ರಮವಾಗಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಂಜುಂಡಸ್ವಾಮಿ ಎಂಬುವವರು ದೂರಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಸಂಬಂಧಪಟ್ಟ ದಾಖಲೆ ನೀಡಿದರೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.

ಬೀದಿ ನಾಯಿ ಮತ್ತು ಕೋತಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಉತ್ತರಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಅವರು, ಈಗಾಗಲೇ 3 ಬಾರಿ ಕಾರ್ಯಾಚರಣೆ ನಡೆಸಿದ ನಾಯಿಗಳನ್ನು ಹಿಡಿದು, ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಆಯಾಯ ಸ್ಥಳಗಳಿಗೆ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಸೋರೆಕುಂಟೆ ಗೇಟ್ ಬಳಿ ಶಸ್ತ್ರಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಕೋತಿ ಹಿಡಿಯಲು ವಿಶಾಖಪಟ್ಟಣಂನಿಂದ ಪರಿಣತರನ್ನು ಕರೆಸಬೇಕಾಗಿದೆ. ಈ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ ಎಂದರು.

ಪಾಲಿಕೆಯ ಪರವಾಗಿ ಆರೋಗ್ಯಾಧಿಕಾರಿ ಡಾ.ನಾಗೇಶ್, ಎಂಜಿನಿಯರ್‌ಗಳಾದ ಸಂದೀಪ್, ಮಧುಸೂಧನ್, ಪರಿಸರ ವಿಭಾಗದ ಕೃಷ್ಣಮೂರ್ತಿ, ಕಂದಾಯ ವಿಭಾಗದ ರುದ್ರಮೂರ್ತಿ, ಬೀದಿ ದೀಪ, ಕಸ ನಿರ್ವಹಣೆ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.

ಜೈನ ಸಮಾಜದ ಸುರೇಶ್, ಧನಿಯಕುಮಾರ್, ಬೆಸ್ಟೆಕ್ ರಾಮರಾಜು, ವಿನೋದ್, ಬಾಲಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.