ADVERTISEMENT

ಮುಂಗಾರು ಹೊಯ್ದಾಟ: ಮೇವಿಗೆ ಮುಂದುವರಿದಿದೆ ಪರದಾಟ

ಜಿಲ್ಲೆಯಲ್ಲಿ ನಾಲ್ಕು ತಿಂಗಳಿಂದ ನಡೆಯುತ್ತಿರುವ ಮೇವು ಬ್ಯಾಂಕ್‌ ಮೇವೇ ಜಾನುವಾರುಗಳಿಗೆ ಆಧಾರ

ರಾಮರಡ್ಡಿ ಅಳವಂಡಿ
Published 8 ಜುಲೈ 2019, 19:45 IST
Last Updated 8 ಜುಲೈ 2019, 19:45 IST
ಎಲೆರಾಂಪುರ ಮೇವು ಬ್ಯಾಂಕ್‌ಗೆ ಶುಕ್ರವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ರೈತರು ಕೈ ಮುಗಿದು ಮೇವು ಬ್ಯಾಂಕ್ ಬಂದ್ ಮಾಡಬಾರದು ಎಂದು ಮನವಿ ಮಾಡಿದ ನೋಟ
ಎಲೆರಾಂಪುರ ಮೇವು ಬ್ಯಾಂಕ್‌ಗೆ ಶುಕ್ರವಾರ ಭೇಟಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ರೈತರು ಕೈ ಮುಗಿದು ಮೇವು ಬ್ಯಾಂಕ್ ಬಂದ್ ಮಾಡಬಾರದು ಎಂದು ಮನವಿ ಮಾಡಿದ ನೋಟ   

ತುಮಕೂರು: ಕಳೆದ ವರ್ಷ ಡಿಸೆಂಬರ್ ಕೊನೆಯಿಂದಲೇ ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಶುರುವಾಗಿದ್ದು, ಜುಲೈ ತಿಂಗಳಲ್ಲೂ ಅದು ಮುಂದುವರಿದಿದೆ.

ಬೇಸಿಗೆ ಕಳೆದು ಮುಂಗಾರು ಪೂರ್ವ ಮಳೆ ನಿರೀಕ್ಷೆ ಹುಸಿಯಾಗಿದೆ. ಈ ಮಳೆಗೆ ಅಲ್ಪಸ್ವಲ್ಪ ಹುಲ್ಲು, ಮೇವು ಬರುವ ನಿರೀಕ್ಷೆಯೂ ಮುಗಿದಿದೆ. ಮುಂಗಾರು ಮಳೆ ಮೋಡಗಳು ತೇಲುವುದು ಬಿಟ್ಟರೆ ರಭಸದ ಮಳೆ ಜಿಲ್ಲೆಯ ಯಾವ ಕಡೆಯಲ್ಲೂ ಸುರಿದಿಲ್ಲ. ಹೀಗಾಗಿ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಇನ್ನೂ ನೀಗಿಲ್ಲ.

ಚದುರಿದಂತೆ ಆದ ಮಳೆಗೆ ಕೆಲ ಕಡೆ ಹುಲ್ಲು ಬೆಳೆದಿದ್ದರೂ ಜಾನುವಾರುಗಳ ಬಾಯಿಗೆ ಬರುದಂತಿದೆ. ದಿನಪೂರ್ತಿ ಮೇಯಿಸಿದರೂ ಹೊಟ್ಟೆ ತುಂಬುವುದಿಲ್ಲ. ಮೇವು ಬೇಕೇ ಬೇಕಾಗಿದೆ. ಹೀಗಾಗಿ, ಎಲ್ಲೆಲ್ಲಿ ಮೇವು ಇದೆಯೊ ಅಲ್ಲಿಂದ ಹುಡುಕಾಡಿ ಮೇವನ್ನು ರೈತರು ತರುತ್ತಿದ್ದಾರೆ.

ADVERTISEMENT

ಪಶು ಪಾಲನಾ ಇಲಾಖೆ ಜಿಲ್ಲೆಯಲ್ಲಿ ಸ್ಥಾಪಿಸಿರುವ ಮೇವು ಬ್ಯಾಂಕ್‌ಗಳಲ್ಲೂ ರೈತರು ಜಾನುವಾರು ಕಾರ್ಡ್ ಹಿಡಿದುಕೊಂಡು ಸಾಲುಗಟ್ಟಿ ನಿಂತು ಮೇವು ಪಡೆದುಕೊಳ್ಳುವುದು ಮುಂದುವರಿದಿದೆ. ಮೇವು ಬ್ಯಾಂಕ್ ಆರಂಭಿಸದಿದ್ದರೂ ಚಿಂತೆ ಇಲ್ಲ. ಇರುವ ಮೇವು ಬ್ಯಾಂಕ್ ಸದ್ಯಕ್ಕೆ ಬಂದ್ ಮಾಡಬಾರದು ಎಂದು ರೈತರು ಮನವಿ ಮಾಡುತ್ತಿದ್ದಾರೆ.

ಪಶು ಪಾಲನಾ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಮೇವು ಆಧಾರಿತ 7,08,185 ಜಾನುವಾರುಗಳಿದ್ದು (ದನ ಮತ್ತು ಎಮ್ಮೆ) ಮುಂಗಾರು ವಿಳಂಬವಾಗಿದ್ದರಿಂದ ಜಾನುವಾರುಗಳಿಗೆ ಪಶು ಪಾಲನಾ ಇಲಾಖೆಯು ಮೇವು ಬ್ಯಾಂಕ್ ಮೂಲಕ ಮೇವು ಪೂರೈಕೆ ಮಾಡುವುದು ಅನಿವಾರ್ಯವಾಗಿದೆ.

ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಅಲ್ಪಸ್ವಲ್ಪ ಮಳೆಯೂ ಆಗದೇ ಇರುವುದರಿಂದ ಮೇವಿನ ಪರದಾಟ ಇತರ ತಾಲ್ಲೂಕುಗಳಿಂತ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.