ಪ್ರಜಾವಾಣಿ ವಾರ್ತೆ
ತುರುವೇಕೆರೆ: ನಿರಂತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿ, ಮಗ ಇಬ್ಬರೂ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.
ಬ್ರಾಹ್ಮಣರ ಬೀದಿಯಲ್ಲಿ ವಾಸವಾಗಿದ್ದ ಕಮಲಮ್ಮ (78) ಮತ್ತು ಅವರ ಮಗ ರಘು (55) ಮೃತರು. ಇಬ್ಬರೂ ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅನಾರೋಗ್ಯ ಸಹಿಸಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರ ಬರೆದಿಟ್ಟು ಶುಕ್ರವಾರ ಬೆಳಗಿನ ಜಾವ ಮನೆಯ ತೀರಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಮೃತನ ತಮ್ಮ ರಾಜೇಶ್ ಗುರುವಾರ ರಾತ್ರಿಯಿಂದ ತಾಯಿ ಮತ್ತು ಅಣ್ಣನಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡ ರಾಜೇಶ್ ಪಕ್ಕದ ಮನೆಯವರಿಗೆ ಕರೆಮಾಡಿ ಗಮನಿಸುವಂತೆ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಮೃತ ರಘು ಗೋಣಿತುಮಕೂರಿನ ರಾಮಾಂಜನೇಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ದ್ವೀತಿಯ ದರ್ಜೆ ಸಹಾಯಕರಾಗಿದ್ದರು. ಅವಿವಾಹಿತರಾಗಿದ್ದ ಇವರು ತಾಯಿಯ ಯೋಗಕ್ಷೇಮ ನೋಡಿಕೊಂಡು ವಾಸವಾಗಿದ್ದರು. ‘ನಮ್ಮನ್ನು ಕಾಡುತ್ತಿದ್ದ ಅನಾರೋಗ್ಯವೇ ನಮ್ಮ ಸಾವಿಗೆ ಕಾರಣ’ ಎಂದು ಪತ್ರ ಬರೆದಿದ್ದಾರೆಂದು ಪಟ್ಟಣದ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.