ADVERTISEMENT

ಕುಡಿಯುವ ನೀರಿಗಾಗಿ ಪುರಸಭೆ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 2:48 IST
Last Updated 19 ಜನವರಿ 2021, 2:48 IST
ಕುಣಿಗಲ್ ಪುರಸಭೆ ಮುಂದೆ ನೀರಿಗಾಗಿ ಪ್ರತಿಭಟನೆ ನಡೆಸಿದ ಪುರಸಭೆ ಸದಸ್ಯರಾದ ಮಲ್ಲಿಪಾಳ್ಯ ಶ್ರೀನಿವಾಸ್ ಮತ್ತು ಜಯಲಕ್ಷ್ಮಿ ಅವರೊಂದಿಗೆ ಚರ್ಚಿಸಿದ ಅಧ್ಯಕ್ಷ ನಾಗೇಂದ್ರ
ಕುಣಿಗಲ್ ಪುರಸಭೆ ಮುಂದೆ ನೀರಿಗಾಗಿ ಪ್ರತಿಭಟನೆ ನಡೆಸಿದ ಪುರಸಭೆ ಸದಸ್ಯರಾದ ಮಲ್ಲಿಪಾಳ್ಯ ಶ್ರೀನಿವಾಸ್ ಮತ್ತು ಜಯಲಕ್ಷ್ಮಿ ಅವರೊಂದಿಗೆ ಚರ್ಚಿಸಿದ ಅಧ್ಯಕ್ಷ ನಾಗೇಂದ್ರ   

ಕುಣಿಗಲ್: ಪುರಸಭೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಪುರಸಭಾ ಸದಸ್ಯರು ಪುರಸಭಾ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸದಸ್ಯ ಮಲ್ಲಿಪಾಳ್ಯ ಶ್ರೀನಿವಾಸ್ ಹಾಗೂ ಸದಸ್ಯೆ ಜಯಲಕ್ಷ್ಮಿ ಅವರು, ‘ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಲಭ್ಯತೆ ಇದ್ದರೂ ಸಮಪರ್ಕವಾಗಿ ವಿತರಣೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. 100 ಕೊಳವೆ ಬಾವಿಗಳು ಮತ್ತು ಪಟ್ಟಣದ ದೊಡ್ಡಕೆರೆಯಲ್ಲಿ ಸಂಗ್ರಹವಾಗಿರುವ ನೀರನ್ನು ಶುದ್ಧೀಕರಿಸಿ ವಿತರಣೆ ಮಾಡುವ ವ್ಯವಸ್ಥೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರಿದ್ದರೂ ಕುಡಿಯುವ ಭಾಗ್ಯ ಇಲ್ಲದಂತಾಗಿದೆ. ನೀರಿನ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಸಮಸ್ಯೆಗಳಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ಎಂಟು ದಿನಗಳಿಂದ ವಾರ್ಡ್ ನಂ. 22, 23, 13, 14ರಲ್ಲಿ ಕುಡಿಯುವ ನೀರು ವಿತರಣೆಯಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ವಾರ್ಡ್‌ಗಳಲ್ಲಿ ನಾಗರಿಕರಿಗೆ ಉತ್ತರಿಸಲಾಗದೆ ಮತ್ತು ಸಮಸ್ಯೆ ಬಗೆಹರಿಸಲಾಗದೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ’ ಎಂದರು.

ADVERTISEMENT

ಸದಸ್ಯರ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದ ಅಧ್ಯಕ್ಷ ನಾಗೇಂದ್ರ, ‘ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದ್ದರು ಕ್ರಮ ಕೈಗೊಂಡಿಲ್ಲ. ಸಮಸ್ಯೆ ಇರುವ ಪ್ರದೇಶಗಳಿಗೆ ಕನಿಷ್ಠ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಬಹುದಿತ್ತು’ ಎಂದು ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.

ಮುಖ್ಯಾಧಿಕಾರಿ ರವಿಕುಮಾರ್ ಪ್ರತಿಭಟನಕಾರರ ಬಳಿ ಚರ್ಚಿಸಿ, ‘ಸಮಸ್ಯೆಗಳಿರುವುದು ನಿಜ. ಎಲ್ಲಾ ಸಮಸ್ಯೆಗಳನ್ನೂ ಏಕಕಾಲದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಹಂತಹಂತವಾಗಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಸದಸ್ಯರೇ ಪ್ರತಿಭಟನೆಗೆ ಇಳಿಯುವುದು ತರವಲ್ಲ’ ಎಂದು ತಿಳಿಸಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆದರು.

ಸುರೇಶ್, ಆಜಮ್ ಪಾಷಾ, ಅಬ್ದುಲ್ ಅಮಿದ್, ವಿಶ್ವ ಕರ್ಮ ಕ್ಷೇಮಾಭಿವೃದ್ಧಿ ಸಂಘದ ಕುಮಾರಾಚಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.