
ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಶನಿವಾರ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ನವೆಂಬರ್, ಡಿಸೆಂಬರ್, ಜನವರಿ ತಿಂಗಳ ಷಷ್ಠಿಗಳಲ್ಲಿ ಅಂತ್ಯ ಸುಬ್ರಹ್ಮಣ್ಯ ನಾಗಲಮಡಿಕೆ ದೇಗುಲದಲ್ಲಿ ಉತ್ಸವಾದಿ, ವಿಶೇಷ ಪೂಜೆ ಆಚರಣೆಗಳು ನಡೆಯಲಿದೆ.
ಕೊನೆಯ ಷಷ್ಟಿಯ ಪ್ರಯುಕ್ತ ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು. ಬೆಳಗಿನ ಜಾವದಿಂದ ಏಕಾದಶವಾರು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಬಗೆ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ, ಇತ್ಯಾದಿ ಪೂಜಾ ಕಾರ್ಯಕ್ರಮಗಳು ಪ್ರಧಾನ ಅರ್ಚಕ ಪಿ ಬದರಿನಾಥ್ ನೇತೃತ್ವದಲ್ಲಿ ನಡೆದವು.
ಎಂದಿನಂತೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅನ್ನದ ರಾಶಿ ಮೇಲಿರಿಸಿ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ಅನ್ನದ ರಾಶಿ ಭಾಗವಾಗುವುದನ್ನು ಭಕ್ತರು ಕುತೂಹಲದಿಂದ ವೀಕ್ಷಿಸಿದರು.
ರಾಜ್ಯದ ವಿವಿಧ ಭಾಗಗಳು, ಆಂಧ್ರ ಪ್ರದೇಶದಿಂದ ಆಗಮಿಸಿದ್ದ ಭಕ್ತರಿಗೆ ದೇಗುಲ ಮುಂಭಾಗದ ಅಶ್ವಥ ವೃಕ್ಷದ ಬಳಿ ಪ್ರತಿಷ್ಠಾಪಿಸಿದ್ದ ನಾಗರ ವಿಗ್ರಹಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಹಶೀಲ್ದಾರ್ ವೈ.ರವಿ, ಗ್ರೇಡ್– 2 ತಹಶೀಲ್ದಾರ್ ಪ್ರಸಾದ್, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.