ADVERTISEMENT

ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ: ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 7:26 IST
Last Updated 16 ಏಪ್ರಿಲ್ 2025, 7:26 IST
ತುಮಕೂರಿನಲ್ಲಿ ಮಂಗಳವಾರ ಭೂ ಸ್ವಾಧೀನ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗೆ ರೈತರು ಮನವಿ ಸಲ್ಲಿಸಿದರು
ತುಮಕೂರಿನಲ್ಲಿ ಮಂಗಳವಾರ ಭೂ ಸ್ವಾಧೀನ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗೆ ರೈತರು ಮನವಿ ಸಲ್ಲಿಸಿದರು   

ತುಮಕೂರು: ರಾಷ್ಟ್ರೀಯ ಹೆದ್ದಾರಿ–48ರ ನಂದಿಹಳ್ಳಿಯಿಂದ ಮಲ್ಲಸಂದ್ರ ವರೆಗೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಈ ಭಾಗದ ರೈತರು ಜಮೀನು ನೀಡದಿರಲು ನಿರ್ಧರಿಸಿದ್ದಾರೆ.

‘ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಮಾಡಿಕೊಳ್ಳಬಾರದು. ಈ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇರುವ ಭೂಮಿಯನ್ನು ಕಳೆದುಕೊಂಡು ಎಲ್ಲಿಗೆ ಹೋಗಿ ಜೀವಿಸುವುದು. ಬಡ ರೈತರ ಹೊಟ್ಟೆ ಮೇಲೆ ಹೊಡೆಯಬಾರದು’ ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಯಲ್ಲಿ ಮಂಗಳವಾರ ನಂದಿಹಳ್ಳಿ, ದೇವರಹೊಸಹಳ್ಳಿ, ಹೊನ್ನಯ್ಯನಪಾಳ್ಯ, ಕೋಳಿಹಳ್ಳಿ, ಭೈರಸಂದ್ರ, ಗೊಲ್ಲರಹಟ್ಟಿ, ನೇರಳಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಸಭೆ ಕರೆಯಲಾಗಿತ್ತು.

ADVERTISEMENT

ಪ್ರತಿಯೊಬ್ಬ ರೈತರು ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡುವಂತೆ ಅಧಿಕಾರಿ ಕೇಳಿಕೊಂಡರು. ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಪ್ರತ್ಯೇಕವಾಗಿ ಅಭಿಪ್ರಾಯ ಪಡೆಯುವ ಅಗತ್ಯವಿಲ್ಲ. ಎಲ್ಲ ರೈತರು ಒಟ್ಟಾಗಿದ್ದು, ಒಗ್ಗಟ್ಟಿನಿಂದ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿ ಸಭೆಯಿಂದ ಹೊರ ಬಂದರು.

ನಂದಿಹಳ್ಳಿ– ಮಲ್ಲಸಂದ್ರ ನಡುವೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ರಸ್ತೆ ನಿರ್ಮಿಸಲಾಗುತ್ತಿದೆ. ಇದರಿಂದ ಈ ಭಾಗದ ರೈತರು, ಸಾರ್ವಜನಿಕರಿಗೆ ಉಪಯೋಗವಿಲ್ಲ. ಆದರೂ ಇಲ್ಲೇ ಏಕೆ ನಿರ್ಮಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಗುಬ್ಬಿ– ದಾಬಸ್‌ಪೇಟೆಗೆ ಈಗಾಗಲೇ 80 ಅಡಿ ರಸ್ತೆಯನ್ನು ಗುರುತಿಸಲಾಗಿದೆ. ನಕಾಶೆಯಲ್ಲಿ ಈ ರಸ್ತೆ ಇದೆ. ಇದನ್ನೇ ಅಗತ್ಯದಷ್ಟು ವಿಸ್ತರಿಸಿ, ಹೆದ್ದಾರಿ ನಿರ್ಮಿಸಬಹುದು. ಈ ರಸ್ತೆಯಿಂದ 500 ಮೀಟರ್ ದೂರದಲ್ಲಿ ಮತ್ತೊಂದು ರಸ್ತೆ ನಿರ್ಮಿಸುವ ಅಗತ್ಯವೇನಿದೆ? ಯಾರಿಗೆ ಅನುಕೂಲ ಮಾಡಿಕೊಡಲು ಹೊರಟ್ಟಿದ್ದೀರಿ? ಎಂದು ಹರಿಹಾಯ್ದರು.

ನಂದಿಹಳ್ಳಿ– ಮಲ್ಲಸಂದ್ರ ರಸ್ತೆಗೆ ಮೂರು ಬಾರಿ ಸರ್ವೆ ಮಾಡಲಾಗಿದೆ. ಕೆಲವರ ಒತ್ತಡಕ್ಕೆ ಮಣಿದು ತಮಗೆ ಬೇಕಾದಂತೆ ಸರ್ವೆ ಮಾಡಿಸಲಾಗಿದೆ. ಮೊದಲ ಸರ್ವೆಯಲ್ಲಿ ಗೊಲ್ಲಹಳ್ಳಿಯಲ್ಲಿರುವ ಸಚಿವ ಜಿ.ಪರಮೇಶ್ವರ ಮನೆ ಹೋಗುತ್ತಿತ್ತು. ಎರಡನೇ ಸರ್ವೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗುತ್ತಿಲ್ಲ ಎಂಬ ಕಾರಣಕ್ಕೆ ಮೂರನೇ ಸರ್ವೆ ಮಾಡಿಸಿ, ಒಪ್ಪಿಗೆ ನೀಡಲಾಗಿದೆ. ಈ ರಸ್ತೆಯು ಹೆದ್ದಾರಿ ರೀತಿಯಲ್ಲಿ ಇಲ್ಲ, ಸುತ್ತಿ ಬಳಸಿದಂತಿದೆ. ಕೆಲವರ ಅನುಕೂಲಕ್ಕೆ ತಕ್ಕಂತೆ ಬದಲಿಸಲಾಗಿದೆ ಎಂದು ಆರೋಪಿಸಿದರು.

‘ಲೇಔಟ್ ನಿರ್ಮಾಣ ಮಾಡುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೈಪಾಸ್ ನಿರ್ಮಿಸಲಾಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ’ ಎಂದು ನಂದಿಹಳ್ಳಿ ರೈತ ಮುಖಂಡ ರಮೇಶ್ ದೂರಿದರು.

ಪ್ರಮುಖರಾದ ಹೊನ್ನೇದಾಸೇಗೌಡ, ಭರತ್, ಚಿಕ್ಕಣ್ಣ, ಶಿವರಾಜು, ಭೈರಪ್ಪ, ತರುಣ್, ಎಚ್.ಎಸ್.ಲಿಂಗರಾಜು, ಕುಮಾರಯ್ಯ, ಚಿಕ್ಕರುದ್ರಯ್ಯ, ಚಂದ್ರಶೇಖರ್ ಇತರ ರೈತ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.