ADVERTISEMENT

ಕೊರಟಗೆರೆ: ಎಲೆರಾಂಪುರ ಗ್ರಾ.ಪಂ.ಗೆ ರಾಷ್ಟ್ರೀಯ ಪುರಸ್ಕಾರ

ಅಂತರ್ಜಲ ಮಟ್ಟ ವೃದ್ಧಿಗಾಗಿ ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ

ಎ.ಆರ್.ಚಿದಂಬರ
Published 9 ಜನವರಿ 2022, 7:00 IST
Last Updated 9 ಜನವರಿ 2022, 7:00 IST
ಎಲೆರಾಂಪುರ ಗ್ರಾಮ ಪಂಚಾಯಿತಿ ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಡಿ.ನಾಗೇನಹಳ್ಳಿಯಲ್ಲಿ ಒಣ ಬೇಸಾಯದಿಂದ ಬೆಳೆದಿರುವ ಭತ್ತ
ಎಲೆರಾಂಪುರ ಗ್ರಾಮ ಪಂಚಾಯಿತಿ ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ತಾಲ್ಲೂಕಿನ ಡಿ.ನಾಗೇನಹಳ್ಳಿಯಲ್ಲಿ ಒಣ ಬೇಸಾಯದಿಂದ ಬೆಳೆದಿರುವ ಭತ್ತ   

ಕೊರಟಗೆರೆ: ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರದ ‘ಉತ್ತಮ ಪಂಚಾಯಿತಿ ಪುರಸ್ಕಾರ’ ಲಭಿಸಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕಿನ ಗಡಿ ಭಾಗದ ಡಿ.ನಾಗೇನಹಳ್ಳಿ ಗ್ರಾಮವನ್ನು 2010ರಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ನಿಕ್ರಾ ಯೋಜನೆಯಡಿ ಅಂತರ್ಜಲ ವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಫಲವಾಗಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡ ಕಾರಣದಿಂದಾಗಿ ಗ್ರಾಮಕ್ಕೆ ‘ರಾಷ್ಟ್ರೀಯ ನೀರು ಅಭಿವೃದ್ಧಿ ಪ್ರಶಸ್ತಿ’ ಲಭಿಸಿದೆ.

ಗ್ರಾಮದ ಸುಮಾರು 400 ಹೆಕ್ಟೇರ್ ಭೂ ಪ್ರದೇಶದಲ್ಲಿ 85 ಕೃಷಿ ಹೊಂಡ, 5 ಚೆಕ್‌ ಡ್ಯಾಂ, 8 ಹಳೇ ಚೆಕ್ ಡ್ಯಾಂ ಅಭಿವೃದ್ಧಿ ಸೇರಿದಂತೆ ಕೆರೆ ಅಭಿವೃದ್ಧಿ ಹಾಗೂ ತಿರುವುಗಾಲುವೆ ಮೂಲಕ ನೀರು ಸಂಗ್ರಹಣೆ ಮಾಡಲಾಗಿದೆ. ಬರ ನಿರೋಧಕ ಒಣಬೇಸಾಯ, ತೋಟಗಾರಿಕೆಗೆ ಒತ್ತುನೀಡಲಾಗಿದೆ.

ADVERTISEMENT

ರಾಗಿ, ಒಣ ಭತ್ತ, ತೊಗರಿ ಹೀಗೆ ಕಡಿಮೆ ನೀರು ಬಳಸಿ ಬೆಳೆಯುವ ಬೆಳೆಗಳಿಗೆ ಉತ್ತೇಜನ ನೀಡಲಾಗಿದೆ. ಬೆಟ್ಟದ ನೆಲ್ಲಿ, ಗೋಡಂಬಿ, ಹುಣಸೆ, ಮಾವು, ಹೆಬ್ಬೇವು ಸೇರಿದಂತೆ ಅರಣ್ಯ ಮರಗಳನ್ನು ಬೆಳೆಸಲಾಗಿದೆ. ನೀರಿನ ಮೂಲ ಹೆಚ್ಚಿರುವ ಕಾರಣ ಪ್ರಾಣಿ, ಪಕ್ಷಿ, ಜನುವಾರುಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಮಣ್ಣಿನ ಸವಕಳಿ ಹಾಗೂ ಮಳೆ ನೀರು ಇಂಗಿಸುವ ಸಲುವಾಗಿ ಗ್ರಾಮದ ಸುತ್ತಲಿನ ಜಮೀನುಗಳಲ್ಲಿ ಬದುಗಳನ್ನು ಹಾಕಲಾಗಿದೆ.

10 ವರ್ಷಗಳಿಂದ ನಿಕ್ರಾ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದಾಗಿ ಅಂತರ್ಜಲ ವೃದ್ಧಿಯಾಗಿ ಈ ಭಾಗದಲ್ಲಿದ್ದ ನೀರಿನ ಬವಣೆ ನೀಗಿದೆ. ಸಂಪೂರ್ಣ ನಿಷ್ಕ್ರಿಯಗೊಂಡಿದ್ದ ಸುಮಾರು 25 ಕೊಳವೆಬಾವಿಗಳು ಮರು ಪೂರಣಗೊಂಡಿವೆ. ಒಣಗಿದ್ದ ಬಾವಿಗಳಲ್ಲಿ ನೀರು ನಿಂತಿದೆ. ಸಂಪೂರ್ಣ ಬೆಟ್ಟ ಹಾಗೂ ಗುಡ್ಡ ಪ್ರದೇಶವಾದ ಈ ಭಾಗದಲ್ಲಿ ಈ ಮೊದಲು ಮಳೆ ನೀರು ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡ ಕೃಷಿ ವಿಜ್ಞಾನ ಕೇಂದ್ರ ಡಿ.ನಾಗೇನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿತ್ತು. ದೇಶದಲ್ಲಿ ಇದೇ ರೀತಿ ನಿಕ್ರಾ ಯೋಜನೆಯಡಿ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ರಾಜ್ಯದಲ್ಲಿ 4 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಗ್ರಾಮದಲ್ಲಿ ಯೋಜನೆ ಅನುಷ್ಠಾನಗೊಂಡು ಈಗ ಅದು ಸಫಲವಾದ್ದರಿಂದ ಮಾದರಿ ಗ್ರಾಮವಾಗಿ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.