ಮಧುಗಿರಿ: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಮತ್ತು ಕಂಬಗಳಿಗೆ ಅನುಪಯುಕ್ತ ಗಿಡ ಹಾಗೂ ಬಳ್ಳಿಗಳು ಸುತ್ತಿಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಬೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ತಾಲ್ಲೂಕಿನಲ್ಲಿ ಕೆಲ ದಿನಗಳ ಹಿಂದೆ ಉತ್ತಮ ಮಳೆಯಾಗಿತ್ತು. ಇದರಿಂದಾಗಿ ಅನುಪಯುಕ್ತ ಗಿಡ, ಬಳ್ಳಿ ಹೆಚ್ಚಾಗಿ ಬೆಳೆದು ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಆವರಿಸಿಕೊಂಡಿವೆ. ಕೆಲವೆಡೆ ಮರಗಳ ಕೊಂಬೆ ಹೊರಚಾಚಿ ತಂತಿಗಳನ್ನು ಸ್ಪರ್ಶಿಸುತ್ತಿವೆ. ಕಂಬಗಳ ಮೇಲೆ ಬೀಳುವ ಮಳೆ ನೀರು ಬಳ್ಳಿ, ಗಿಡಗಳ ಮೂಲಕ ನೆಲದಲ್ಲಿ ಹರಿಯುವದರಿಂದ ವಿದ್ಯುತ್ ಪ್ರವಹಿಸುವ ಸಾಧ್ಯತೆಯಿದೆ. ರಸ್ತೆಯ ಬದಿಗಳಲ್ಲಿ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳು ಇರುವುದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಇದೆ.
ಪಟ್ಟಣ ಹಾಗೂ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಸುರಕ್ಷಿತ ಬೇಲಿ ಅಳವಡಿಸಿಲ್ಲ. ಇದರಿಂದಾಗಿ ಜಾನುವಾರು, ಕುರಿ, ಮೇಕೆ, ಮಕ್ಕಳು ಇವುಗಳ ಕಡೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೆಡೆ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಅನುಪಯುಕ್ತ ಗಿಡ ಮತ್ತು ಬಳ್ಳಿಗಳು ವಿದ್ಯುತ್ ಪರಿವರ್ತಕ ಮತ್ತು ಕಂಬಗಳನ್ನು ಮರೆಮಾಚಿವೆ. ಕಂಬಗಳ ಸುತ್ತ ಬೆಳೆದಿರುವ ಸಸ್ಯಗಳನ್ನು ತಿನ್ನಲು ಹೋಗಿ ಜಾನುವಾರುಗಳು ವಿದ್ಯುತ್ ಅವಘಢಕ್ಕೆ ತುತ್ತಾದ ನಿದರ್ಶನಗಳಿವೆ. ಮಳೆ ಬರುವಾಗ ಶಾರ್ಟ್ ಸರ್ಕೀಟ್ ಉಂಟಾಗಿ ಹಲವು ಗಂಟೆ ವ್ಯತ್ಯಯವಾಗುತ್ತಿದೆ.
ಭೂಮಿಯಲ್ಲಿ ಸರಿಯಾಗಿ ಆಳ ತೋಡದೆ ಮೇಲ್ಮಟ್ಟದಲ್ಲಿ ವಿದ್ಯುತ್ ಕಂಬಗಳನ್ನು ನಿಲ್ಲಿಸುತ್ತಿರುವುದರಿಂದ ಮಳೆ ಮತ್ತು ಗಾಳಿಗೆ ಕಂಬಗಳು ಬಾಗುತ್ತಿವೆ. ಇದರಿಂದ ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುವುದರ ಜೊತೆಗೆ ಜನ ಮತ್ತು ಜಾನುವಾರುಗಳಿಗೆ ಜೀವ ಹಾನಿಯಾಗುತ್ತದೆ. ಇಂತಹ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೈತರು ದೂರಿದರು.
ರಭಸದಲ್ಲಿ ಬೀಸುವ ಗಾಳಿಯಿಂದಾಗಿ ಯಾವಾಗ ವಿದ್ಯುತ್ ಕಂಬಗಳು ನೆಲಕ್ಕೊರಗಿ ಯಾರ ಜೀವಕ್ಕೆ ಎರವಾಗುತ್ತವೊ ಎಂಬ ಭಯ ರೈತರನ್ನು ನಿತ್ಯ ಕಾಡುತ್ತಿದೆ. ವಾಲಿದ ವಿದ್ಯುತ್ ಕಂಬ, ತಂತಿಗಳನ್ನು ದುರಸ್ತಿಗೊಳಿಸಿ ಗ್ರಾಮಸ್ಥರು ಮೂರು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಮಾಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಬಾಗಿರುವ ವಿದ್ಯುತ್ ಕಂಬಗಳ ಬೆಂಕಿಯ ಕಿನ್ನಾಲೆಗೆ ಸಿಲುಕಿ ಬೆಳೆಗಳು ಬೆಂಕಿಗೆ ಆಹುತಿಯಾಗುತ್ತಿವೆ. ಇದನ್ನು ಕಂಡೂ ಕಾಣದಂತೆ ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳು ಕಣ್ಮುಚ್ಚಿ ಕುಳಿತಿದ್ದಾರೆ. ರೈತರ ಮನವಿಗಳಿಗೆ ಅಧಿಕಾರಿಗಳ ಸ್ಪಂದನೆಯೇ ಇಲ್ಲದಂತಾಗಿದೆ. ಮತ್ತಷ್ಟು ಅನಾಹುತಗಳು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಬಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಿದ್ದಾಪುರ ಗೊಲ್ಲರಹಟ್ಟಿ ಶಾಲೆ ಆವರಣದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಮಕ್ಳಳ ಹಿತದೃಷ್ಟಿಯಿಂದ ತೆರವುಗೊಳಿಸುವಂತೆ ಮುಖ್ಯ ಶಿಕ್ಷಕ 2024 ಜುಲೈ 7ರಂದು ಬೆಸ್ಕಾಂ ಎಇಇ ಅವರಿಗೆ ಮನವಿ ಪತ್ರ ನೀಡಿದ್ದರು. ಇವರೆಗೆ ತೆರವು ಮಾಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಇತ್ತೀಚೆಗೆ ಸುರಿದ ಮಳೆಯಲ್ಲೇ ಚೌಡೇಶ್ವರಿ ದೇವಾಲಯದ ರಸ್ತೆಯಲ್ಲಿರುವ ವಿದ್ಯುತ್ ಪರಿವರ್ತಕಗಳಿಗೆ ಮರದ ಕೊಂಬೆಗಳು ತಗಲಿ ಬೆಂಕಿ ಉರಿಯುತ್ತಿರುವ ದೃಶ್ಯ ಕಂಡ ಸಾಕಷ್ಟು ನಿವಾಸಿಗಳು ಭಯಭೀತರಾಗಿದ್ದಾರೆ. ಇಂತಹ ಘಟನೆ ಹಲವು ಬಾರಿ ನಡೆದರೂ ನಿರ್ಲಕ್ಷ್ಯವಹಿಸಿದ್ದಾರೆ.
ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ವಿದ್ಯುತ್ ತಂತಿ ಕಂಬಗಳು ಬಾಗಿರುವುದನ್ನು ಸರಿಪಡಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಹಿಂದೆಯೇ ಸಭೆಯಲ್ಲಿ ಸೂಚಿಸಿದ್ದೇನೆ.ಕೆ.ಎನ್.ರಾಜಣ್ಣ, ಸಹಕಾರ ಸಚಿವ
ವಿದ್ಯುತ್ ಪರಿವರ್ತಕಗಳಲ್ಲಿ ಗಿಡ ಮತ್ತು ಬಳ್ಳಿಗಳು ಆವರಿಸಿಕೊಂಡಿವೆ. ಬಳ್ಳಿ ಹಬ್ಬುವ ಮುನ್ನವೇ ಸ್ವಚ್ಛ ಮಾಡಬೇಕು. ವಿದ್ಯುತ್ ಪರಿವರ್ತಕ ಸುತ್ತಲೂ ಸುರಕ್ಷಿತ ಬೇಲಿ ನಿರ್ಮಿಸಬೇಕು.ಗೋವಿಂದರಾಜು, ಗಂಜಲುಗುಂಟೆ
ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಮರ ಗಿಡದ ಕೊಂಬೆ ತಾಗಿ ಬೆಂಕಿ ಕಿಡಿ ಕಾಣಿಸಿಕೊಳ್ಳುತ್ತಿವೆ. ರಸ್ತೆ ಬದಿಯಲ್ಲಿ ಓಡಾಡುವುದಕ್ಕೂ ಭಯವಾಗುತ್ತಿದೆ. ಅಧಿಕಾರಿಗಳು ಆಗಾಗ್ಗೆ ತೆರವುಮಾಡಬೇಕು.ವೆಂಕಟೇಶ್ ಬ್ರಹ್ಮದೇವರಹಳ್ಳಿ
ರೈತರ ಜಮೀನುಗಳಲ್ಲಿ ಬಾಗಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು. ಅನಾಹುತ ಸಂಭವಿಸುವ ಮನ್ನ ಅಧಿಕಾರಿಗಳು ಗಮನ ನೀಡಬೇಕು. ಇಲ್ಲವಾದರೆ ಅದೆಷ್ಟೊ ಜೀವಗಳು ಕಳೆದುಕೊಳ್ಳಬೇಕಾಗುತ್ತದೆ. ಜನಪ್ರತಿನಿಧಿಗಳು ಗಮನಹರಿಸಬೇಕು.ಕೆಂಪಣ್ಣ ಪುರವರ
ಮಧುಗಿರಿ ತಾಲ್ಲೂಕಿನ ಗಂಜಲುಗುಂಟೆ ಸಮೀಪ ವಿದ್ಯುತ್ ಕಂಬಕ್ಕೆ ಹಬ್ಬಿದ ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.