ADVERTISEMENT

ಧರ್ಮದ ಹೆಸರಲ್ಲಿ ಏಕತೆಗೆ ಭಂಗ ಸಲ್ಲದು

ತುಮಕೂರು ತಾಲ್ಲೂಕು ಐನಾಪುರ ಗ್ರಾಮದಲ್ಲಿ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 16:07 IST
Last Updated 20 ಜನವರಿ 2019, 16:07 IST
ತುಮಕೂರು ತಾಲ್ಲೂಕು ಐನಾಪುರದಲ್ಲಿ ನಡೆದ ದೇವಸ್ಥಾನ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ನಡೆದ ಹೋಮದ ಪೂರ್ಣಾಹುತಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಾಗವಹಿಸಿದ್ದರು. ಡಿ.ಸಿ.ಗೌರಿಶಂಕರ್, ಎಸ್.ಪಿ.ಮುದ್ದಹನುಮೇಗೌಡ ಇದ್ದರು
ತುಮಕೂರು ತಾಲ್ಲೂಕು ಐನಾಪುರದಲ್ಲಿ ನಡೆದ ದೇವಸ್ಥಾನ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ನಡೆದ ಹೋಮದ ಪೂರ್ಣಾಹುತಿಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭಾಗವಹಿಸಿದ್ದರು. ಡಿ.ಸಿ.ಗೌರಿಶಂಕರ್, ಎಸ್.ಪಿ.ಮುದ್ದಹನುಮೇಗೌಡ ಇದ್ದರು   

ತುಮಕೂರು: ಧರ್ಮ, ದೇವರ ಹೆಸರಿನಲ್ಲಿ ದೇಶದ ಏಕತೆ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಗೂಳೂರು ಹೋಬಳಿಯ ಐನಾಪುರ ಗ್ರಾಮದಲ್ಲಿ ಮೋಕ್ಷ ಲಕ್ಷ್ಮಿರಂಗನಾಥ ಸ್ವಾಮಿ ಹಾಗೂ ಫಲಪ್ರದ ಆಂಜನೇಯಸ್ವಾಮಿ ದೇವಸ್ಥಾನ ಉದ್ಘಾಟನೆ, ರಾಜಗೋಪುರದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇನ್ನೊಬ್ಬರನ್ನು ಪ್ರೀತಿಸುವುದು, ಅವರ ಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಧರ್ಮ. ಆದರೆ, ವಾಸ್ತವಿಕವಾಗಿ ವ್ಯತಿರಿಕ್ತವಾದ ಕ್ರಿಯೆಗಳು ನಡೆಯುತ್ತಿವೆ. ದೇಶದಲ್ಲಿ 35 ಕೋಟಿ ಮುಸ್ಲಿಂ, 15 ಕೋಟಿ ಕ್ರಿಶ್ಚಿಯನ್ನರು ಇದ್ದಾರೆ. ಹಿಂದೂ ರಾಷ್ಟ್ರದ ಹೆಸರಿನಲ್ಲಿ ಮತ್ತೊಮ್ಮೆ ದೇಶ ವಿಭಜನೆಗೆ ಅವಕಾಶ ಮಾಡಿಕೊಡಬೇಕೇ’ ಎಂದು ಪ್ರಶ್ನಿಸಿದರು.

ADVERTISEMENT

‘ನಾನು 13 ವರ್ಷದವನಾಗಿದ್ದ ದಿನದಿಂದ ದೇವಸ್ಥಾನಗಳಿಗೆ ಹೋಗುತ್ತೇನೆ. ಎಂದೂ ಹಿಂದೂ ಧರ್ಮ ವಿರೋಧಿಸಿಲ್ಲ. ಆದರೆ, ಗಣೇಶ ಹಾಲು ಕುಡಿದ, ದೇವರು ಮೈ ಮೇಲೆ ಬಂದಿತು ಎನ್ನುವ ಮೌಢ್ಯ ವಿರೋಧಿಸುತ್ತೇನೆ. ಇದನ್ನು ಅರಿಯದ ಕೆಲವರು ನಾನು ಹಿಂದೂ ಧರ್ಮ ವಿರೋಧಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡುತ್ತಾರೆ. ಇಂತಹ ಮಾತುಗಳಿಗೆ ನಾನು ಬೆಲೆ ನೀಡುವುದಿಲ್ಲ’ ಎಂದು ತಿಳಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ದೇವೇಗೌಡರ ಉತ್ಸಾಹ ನಮಗೆಲ್ಲರಿಗೂ ಸ್ಫೂರ್ತಿ. ಅವರ ನಾಯಕತ್ವದ ಅವಶ್ಯಕತೆ ದೇಶಕ್ಕೆ ಇದೆ. ಇಂದಿನ ಕಾರ್ಯಕ್ರಮದಲ್ಲಿ 100 ಮೆಟ್ಟಿಲು ಹತ್ತಿ ಕುಂಭಾಭಿಷೇಕ ಮಾಡಿದ್ದಾರೆ’ ಎಂದು ಹೇಳಿದರು.

ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ‘ದೈವಶಕ್ತಿ ಮತ್ತು ಒಗ್ಗಟ್ಟು ಇದ್ದರೆ ಎಂತಹ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಈ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನಗಳೇ ಸಾಕ್ಷಿ. ಈ ದೇವಸ್ಥಾನಗಳಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಲು ನಾನು ಸಿದ್ಧ’ ಎಂದು ನುಡಿದರು.

ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ಕಾರ್ಯಗಳಿಗೂ ಸಹಕಾರ ಇದ್ದೇ ಇರುತ್ತದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ, ಮುಖಂಡರಾದ ಹಿರೇಹಳ್ಳಿ ಮಹೇಶ್, ಅಲೆನೂರು ಅನಂತು, ಪಾಲನೇತ್ರಯ್ಯ, ವೈ.ಟಿ. ನಾಗರಾಜು, ಮಹಮ್ಮದ್ ಆಜಂ, ಇಕ್ಬಾಲ್ ಅಹಮ್ಮದ್, ರೇಣುಕಮ್ಮ, ಗೌರಮ್ಮ, ಪಾಲಿಕೆ ಸದಸ್ಯೆ ಮಂಜುನಾಥ್, ಕುಮಾರ್, ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ, ಸುವರ್ಣಗಿರಿ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.