ADVERTISEMENT

ಪೂರ್ವಗ್ರಹ ಪಾಪದ ಕೂಸಾಗಿದ್ದೇವೆ: ಬರಗೂರು ವಿಷಾದ

‘ಹಿಂದೂಪುರ’ ಕಾದಂಬರಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 16:08 IST
Last Updated 5 ಏಪ್ರಿಲ್ 2025, 16:08 IST
<div class="paragraphs"><p>ತುಮಕೂರಿನಲ್ಲಿ ಶನಿವಾರ ಲೇಖಕ ಓ.ನಾಗರಾಜು ಅವರ ‘ಹಿಂದೂಪುರ’ ಕಾದಂಬರಿಯನ್ನು ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್‌ ಬಿಡುಗಡೆಗೊಳಿಸಿದರು.&nbsp;&nbsp;</p></div>

ತುಮಕೂರಿನಲ್ಲಿ ಶನಿವಾರ ಲೇಖಕ ಓ.ನಾಗರಾಜು ಅವರ ‘ಹಿಂದೂಪುರ’ ಕಾದಂಬರಿಯನ್ನು ‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್‌ ಬಿಡುಗಡೆಗೊಳಿಸಿದರು.  

   

ತುಮಕೂರು: ಕೆಲವೊಮ್ಮೆ ವಿಮರ್ಶೆ ಕೂಡ ಜಾತಿ, ವರ್ಗ, ಪಂಥ, ಬದುಕು ಕುರಿತು ವಿಮರ್ಶಕನ ಪರಿಕಲ್ಪನೆಯನ್ನು ಅವಲಂಬಿಸಿರುತ್ತದೆ. ಲೇಖಕರು ಒಂದು ರೀತಿಯಲ್ಲಿ ಪೂರ್ವಗ್ರಹದ ಪಾಪದ ಕೂಸುಗಳಾಗಿದ್ದೇವೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ವಿಷಾದಿಸಿದರು.

ನಗರದಲ್ಲಿ ಶನಿವಾರ ಬಂಡಾಯ ಸಾಹಿತ್ಯ ಸಂಘಟನೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದವನ ಭೂಮಿಕೆ ಸಾಂಸ್ಕೃತಿಕ ಟ್ರಸ್ಟ್‌, ಲೇಖಕಿಯರ ಸಂಘ, ಪ್ರಕೃತಿ ಜನಸೇವ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಲೇಖಕ ಓ.ನಾಗರಾಜು ಅವರ ‘ಹಿಂದೂಪುರ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಕನ್ನಡ ಸಾಹಿತ್ಯದಲ್ಲಿ ಬಂಡಾಯ, ದಲಿತ, ಪ್ರಗತಿಪರ ಸಾಹಿತಿಗಳ ಕೃತಿಗಳನ್ನು ವಿಮರ್ಶಕರು ನೋಡುವ ದೃಷ್ಟಿಕೋನ ಬದಲಾಗಿದೆ. ಹಾಗಾಗಿಯೇ ಅನೇಕ ಕೃತಿಗಳು ಜನರ ನಡುವೆ ಚರ್ಚೆಗೆ ಬಾರದಂತಾಗಿವೆ. ಲೇಖಕರು ಅಧೀರರಾಗುವ ಅವಶ್ಯಕತೆ ಇಲ್ಲ. ಸಿದ್ಧ ಮಾದರಿಯ ಸಾಹಿತ್ಯ ಮತ್ತು ವಿಮರ್ಶೆಯ ನೋಟ ಹತ್ತಿಕ್ಕುವ ಬರವಣಿಗೆ ಮುಂದುವರಿಯಬೇಕು ಎಂದು ಹೇಳಿದರು.

‘ಸುಧಾ’ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ್‌ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ‘ಸಾಹಿತ್ಯ ಪ್ರದರ್ಶಕ ಕಲೆ ಆಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಸಾಹಿತ್ಯ ಪ್ರದರ್ಶನ ಆಗಬಾರದು. ಚರ್ಚೆಯಲ್ಲಿ ಲೇಖಕ ಇರಬಾರದು. ಪುಸ್ತಕವೇ ಚರ್ಚೆಯ ಕೇಂದ್ರವಾಗಬೇಕು’ ಎಂದರು.

ಪುಸ್ತಕವನ್ನು ಪ್ರಸಾದ ಎಂದು ಭಾವಿಸುವ ಗುಂಪು ಒಂದಾದರೆ, ಪದಾರ್ಥ ಎನ್ನುವ ಮತ್ತೊಂದು ಗುಂಪಿದೆ. ಈ ಎರಡು ಗುಂಪನ್ನು ಮೀರಿದ ಕೃತಿ ಹಿಂದೂಪುರ. ಇದು ಸ್ತ್ರೀ ಕಥನವಾಗಿದೆ. ಬಹುತ್ವದ ನೆಲೆಗಟ್ಟಿನಲ್ಲಿ ರಚಿತವಾದ ನೈತಿಕತೆ ಮತ್ತು ಅನೈತಿಕತೆಯ ನಡುವಿನ ಮುಖಾಮುಖಿಯಾಗಿದೆ. ‘ಹಿಂದೂಪುರ’ ವರ್ತಮಾನದ ತಲ್ಲಣ ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಲಕ್ಷ್ಮಿನಾರಾಯಣ ಸ್ವಾಮಿ, ‘ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಗಳಲ್ಲಿನ ದಲಿತತ್ವದ ಪ್ರತಿನಿಧೀಕರಣ ಕೃತಿಯಾಗಿದೆ. ಈ ಕೃತಿಗೆ ಚಾರಿತ್ರಿಕ ಮಹತ್ವ ಮತ್ತು ಸಮಕಾಲೀನ ಸ್ಪಂದನೆ ದೊರೆಯಬೇಕು’ ಎಂದು ಆಶಿಸಿದರು.

ಲೇಖಕ ಓ.ನಾಗರಾಜು, ಮುಖಂಡ ಕುಂದೂರು ತಿಮ್ಮಯ್ಯ, ಹರಿಕಥಾ ವಿದ್ವಾನ್‌ ಲಕ್ಷ್ಮಣದಾಸ್‌, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್‌.ಸಿದ್ಧಲಿಂಗಪ್ಪ, ಪತ್ರಕರ್ತ ಎಸ್‌.ನಾಗಣ್ಣ, ಮುಖಂಡರಾದ ವಿರೂಪಾಕ್ಷ ಡ್ಯಾಗೇರಹಳ್ಳಿ, ಬಸವರಾಜಪ್ಪ ಅಪ್ಪಿನಕಟ್ಟೆ, ತಿಪ್ಪೇಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.