ADVERTISEMENT

ಚಿಕ್ಕನಾಯಕನಹಳ್ಳಿ | ನರೇಗಾದಲ್ಲಿ ಮಹಿಳಾ ಕಾರ್ಮಿಕರಿಗೆ ಅನ್ಯಾಯ ಆರೋಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 6:09 IST
Last Updated 26 ಆಗಸ್ಟ್ 2025, 6:09 IST
ಚಿಕ್ಕನಾಯಕನಹಳ್ಳಿಯಲ್ಲಿ ಮಹಿಳಾ ಕಾರ್ಮಿಕರಿಗೆ ನರೇಗಾದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು
ಚಿಕ್ಕನಾಯಕನಹಳ್ಳಿಯಲ್ಲಿ ಮಹಿಳಾ ಕಾರ್ಮಿಕರಿಗೆ ನರೇಗಾದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದರು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಭ್ರಷ್ಟ ಅಧಿಕಾರಿಗಳಿಂದ ನರೇಗಾ ಯೋಜನೆಯಡಿ ಮಹಿಳಾ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹಿಂದ್ ಮಜ್ದುರ್ ಸಭಾ ರಾಜ್ಯಾಧ್ಯಕ್ಷ ಎಸ್.ಕುಮಾರ್ ಆಗ್ರಹಿಸಿದರು.

ಸೋಮವಾರ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಹಾಗೂ ನಿರ್ಲಕ್ಷಿಸುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ಮಹಿಳಾ ಕಾರ್ಮಿಕರ ಸಹಯೋಗದಲ್ಲಿ ಪಟ್ಟಣದ ಕಂಬಳಿ ಸೊಸೈಟಿಯಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನಲ್ಲಿ ಸಾವಿರಾರು ಮಹಿಳಾ ಕಾರ್ಮಿಕರಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ತಮ್ಮ ಬಡತನವನ್ನು ಮೆಟ್ಟಿ ನಿಂತು ತನ್ನ ಕುಟುಂಬ ನಿರ್ವಹಿಸಲು ಮಹಿಳಾ ಕಾರ್ಮಿಕರು ದುಡಿಯುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಮಹಿಳಾ ಕಾರ್ಮಿಕರು ಕೆಲಸ ಕೇಳಲು ಹೋದಾಗ ಕೆಲಸವಿಲ್ಲವೆಂದು ಉತ್ತರ ನೀಡುತ್ತಾರೆ.

ADVERTISEMENT

ಮಹಿಳಾ ಕಾರ್ಮಿಕರಿಗೂ ಪುರುಷ ಕಾರ್ಮಿಕ ಸಮಾನವಾದ ಕೆಲಸ ಮಾಡುವಂತೆ ಸೂಚಿಸುತ್ತಾರೆ. ಅಲ್ಲದೆ ಕೊಳಚೆ ಪ್ರದೇಶ ಶುಚಿಗೊಳಿಸುವಂತೆ, ಕೆರೆ, ಕಟ್ಟೆಗಳಲ್ಲಿ ಕೆಲಸ ಮಾಡುವಂತೆ ತಿಳಿಸಿ ಮಹಿಳಾ ಕಾರ್ಮಿಕರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಯಂತ್ರೋಪಕರಣಗಳಿಂದ ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಸಂಚಲನ ಅಧ್ಯಕ್ಷೆ ಮಂಜುಳಾ ಮಾತನಾಡಿ, ಕೆಲಸ ಕೇಳಲು ಹೋದಾಗ ಎರಡು ವಾರ ಕೆಲಸ ನೀಡಿದರು. ನಂತರ ಕೊಳಚೆ ಶುಚಿಗೊಳಿಸುವ ಕೆಲಸ ನೀಡಿ, ಮಾಡಿದರೆ ಮಾಡಿ ಇಲ್ಲವೇ ಬಿಡಿ ಎಂದರು. ನಮ್ಮ ಹಕ್ಕನ್ನು ಅಧಿಕಾರಿಗಳು ಕಸಿಯುತ್ತಿದ್ದಾರೆ. ಪಿಡಿಒ ಗ್ರಾಮ ಪಂಚಾಯಿತಿ ಸದಸ್ಯರ ಜೊತೆ ಶಾಮೀಲಾಗಿ ಯಂತ್ರೋಪಕರಣಗಳಿಂದ ಕೆಲಸ ಮಾಡಿಸಿ ನಮಗೆ ಕೆಲಸವಿಲ್ಲದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಹಿಳಾ ಕಾರ್ಮಿಕರ ಸಂಘಟನೆಯ ರಾಜ್ಯಾಧ್ಯಕ್ಷೆ ಜಿ.ವಿ ಲಕ್ಷ್ಮಿದೇವಿ, ಕಾರ್ಯದರ್ಶಿ ನಿಕಿತಾ, ಆಶಾ, ಅನ್ನಪೂರ್ಣ, ಮಹಿಳಾ ಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.