ತುಮಕೂರು: ‘ಶೈಕ್ಷಣಿಕ ನಗರಿ’ ಎಂಬ ಹಿರಿಮೆಗೆ ಪಾತ್ರವಾಗಿರುವ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ನರ್ಸಿಂಗ್ ಕಾಲೇಜು ಉಪನ್ಯಾಸಕರ ಕೊರತೆಯಿಂದ ಬಳಲುತ್ತಿದೆ.
ಕಾಲೇಜಿಗೆ ಒಟ್ಟು 40 ಉಪನ್ಯಾಸಕರು ಬೇಕಾಗಿದ್ದು, ಕೇವಲ 8 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 12 ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ತಿಂಗಳಲ್ಲಿ ಒಂದೇ ಬಾರಿಗೆ ನಾಲ್ವರನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ವರ್ಗಾವಣೆಯಾಗಿ ತಿಂಗಳು ಕಳೆದರೂ ಖಾಲಿ ಸ್ಥಾನಗಳನ್ನು ಭರ್ತಿಮಾಡಿಲ್ಲ.
ಡಿಪ್ಲೊಮಾ ನರ್ಸಿಂಗ್ ವಿಭಾಗದಲ್ಲಿ 120, ಬಿಎಸ್‌ಸಿ ನರ್ಸಿಂಗ್ ಕಾಲೇಜಿನಲ್ಲಿ 240 ಸೇರಿ ಒಟ್ಟು 360 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪೂರಕವಾದ ವಾತಾವರಣ ಮಾಯವಾಗಿದೆ. ಅಗತ್ಯಕ್ಕೆ ತಕ್ಕಂತೆ ಉಪನ್ಯಾಸಕರು ಮತ್ತು ಸಿಬ್ಬಂದಿ ಇಲ್ಲವಾಗಿದ್ದು, ಮೂಲ ಸೌಕರ್ಯ ಕೊರತೆ ಕಾಡುತ್ತಲೇ ಇದೆ.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ದೊಡ್ಡಾಸ್ಪತ್ರೆ ಆವರಣದಲ್ಲಿಯೇ ಕಾಲೇಜು ಇರುವುದರಿಂದ ಪ್ರಾಯೋಗಿಕ ಕಲಿಕೆಯೂ ಸಿಗಲಿದೆ ಎಂದು ಹೆಚ್ಚಿನವರು ಇದೇ ಕಾಲೇಜು ಆಯ್ಕೆ ಮಾಡಿಕೊಂಡಿದ್ದಾರೆ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಪ್ರತಿ ವರ್ಷ ಕಾಲೇಜು ಸೇರುವುದಕ್ಕೆ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಆದರೆ, ಇಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಪಾಠ ಮಾಡಲು ಬೇಕಾದ ಉಪನ್ಯಾಸಕರೇ ಇಲ್ಲ. ಉಪನ್ಯಾಸಕರ ಅಭಾವದಿಂದ ಅವರ ಕಲಿಕೆ ಅರ್ಧಂಬರ್ಧ ಆಗಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. 8 ಮಂದಿ ಬೋಧಕರು ಇಡೀ ಕಾಲೇಜು ನೋಡಿಕೊಂಡು ಹೋಗಬೇಕಾಗಿದೆ. ಹೆಚ್ಚುವರಿ ತರಗತಿ ತೆಗೆದುಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.
ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಕಾಲೇಜು ಮುಂಭಾಗದಲ್ಲಿರುವ ಕುಡಿಯುವ ನೀರಿನ ಘಟಕ ಕೆಟ್ಟು ಮೂಲೆ ಸೇರಿ ಜಮಾನ ಕಳೆದಿದೆ. ಇದುವರೆಗೆ ಅದನ್ನು ಸುಸ್ಥಿತಿಗೆ ತರುವ ಕಾರ್ಯವಾಗಿಲ್ಲ. ವಿದ್ಯಾರ್ಥಿಗಳು ಕಾಲೇಜು ಪಕ್ಕದಲ್ಲಿರುವ ಎಆರ್‌ಟಿ ಕೇಂದ್ರದ ಬಳಿಗೆ ಹೋಗಿ ನೀರು ತರುತ್ತಿದ್ದಾರೆ. ರೋಗಿಗಳಿಗೆ ಮೀಸಲಿಟ್ಟ ನೀರು ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
‘ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಆಗಾಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಆಸ್ಪತ್ರೆ ಆವರಣದಲ್ಲಿರುವ ಕಾಲೇಜು ಬಗ್ಗೆ ಒಂದು ಮಾತು ಸಹ ಆಡುವುದಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಪರಿಹಾರ ಒದಗಿಸುವ ಪ್ರಯತ್ನ ಆಗುತ್ತಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಬೇಸರ ಹೊರಹಾಕಿದರು.
ಹಸ್ತಾಂತರವಾಗದ ಕಟ್ಟಡ
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನರ್ಸಿಂಗ್ ಕಾಲೇಜಿಗೆ ಹೊಸದಾಗಿ ಕಟ್ಟಡ ನಿರ್ಮಿಸಿದ್ದು ಈಗಾಗಲೇ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಹಸ್ತಾಂತರ ಕಾರ್ಯ ಇನ್ನೂ ಆಗಿಲ್ಲ. ಪ್ರಸ್ತುತ 3 ಕೊಠಡಿಗಳಲ್ಲಿ 360 ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾಗಿದೆ. ಐದು ವರ್ಷದ ಹಿಂದೆ ಹೊಸದಾಗಿ ಕಾಲೇಜು ಆರಂಭಿಸಲಾಯಿತು. ಅಲ್ಲಿಂದ ಇದುವರೆಗೆ ಸ್ವಂತ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಬೇಕಾದ ಲ್ಯಾಬ್‌ನ ಅಗತ್ಯ ತುಂಬಾ ಇದೆ. ಒಂದು ಚಿಕ್ಕದಾದ ಲ್ಯಾಬ್ ಇದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅದು ಸಾಲುತ್ತಿಲ್ಲ. ಕೆಲವರು ತರಗತಿಯಲ್ಲಿ ಉಳಿದರೆ ಬಾಕಿ ವಿದ್ಯಾರ್ಥಿಗಳು ಜಿಲ್ಲಾ ಆಸ್ಪತ್ರೆಯ ವಿವಿಧ ವಾರ್ಡ್‌ಗಳಲ್ಲಿ ರೋಗಿಗಳ ಆರೈಕೆಯಲ್ಲಿ ನಿರತರಾಗಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.