ADVERTISEMENT

ಉದ್ಯೋಗ ಮೀಸಲು: ವಾಲ್ಮೀಕಿ ಶ್ರೀ ಆಗ್ರಹ

ನಿಟ್ಟೂರು: ಬೇಡರ ಕಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 6:34 IST
Last Updated 15 ನವೆಂಬರ್ 2021, 6:34 IST
ಗುಬ್ಬಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್, ಶಾಂತಲಾ ರಾಜಣ್ಣ, ಪ್ರಸನ್ನಾನಂದ ಸ್ವಾಮೀಜಿ, ಸಂಜಯ್ ಕುಮಾರ್ ಸ್ವಾಮೀಜಿ, ಎಸ್.ಡಿ. ದಿಲೀಪ್ ಕುಮಾರ್ ಹಾಗೂ ಮುಖಂಡರು ಹಾಜರಿದ್ದರು
ಗುಬ್ಬಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕ ಎಸ್.ಆರ್. ಶ್ರೀನಿವಾಸ್, ಶಾಂತಲಾ ರಾಜಣ್ಣ, ಪ್ರಸನ್ನಾನಂದ ಸ್ವಾಮೀಜಿ, ಸಂಜಯ್ ಕುಮಾರ್ ಸ್ವಾಮೀಜಿ, ಎಸ್.ಡಿ. ದಿಲೀಪ್ ಕುಮಾರ್ ಹಾಗೂ ಮುಖಂಡರು ಹಾಜರಿದ್ದರು   

ಗುಬ್ಬಿ: ‘ವಾಲ್ಮೀಕಿ ಜನಾಂಗದ ಸ್ಥಿತಿಗತಿ ಅರ್ಥೈಸಿಕೊಂಡು ಸಂವಿಧಾನದಡಿ ಮೀಸಲಾತಿ ನೀಡಿದ್ದರಿಂದ ಸಮುದಾಯವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿದೆ’ ಎಂದು ರಾಜನಹಳ್ಳಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಭಾನುವಾರ ತಾಲ್ಲೂಕಿನ ನಿಟ್ಟೂರಿ ನಲ್ಲಿ ಶಿವಭಕ್ತ ಬೇಡರ ಕಣ್ಣಪ್ಪ ಸ್ವಾಮಿಯ ನೂತನ ದೇವಾಲಯ, ಗೋಪುರ ಮತ್ತು ಸ್ಥಿರಬಿಂಬ, ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮೀಸಲಾತಿ ದೊರೆತಿದ್ದರಿಂದಲೇ ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಗಿದೆ. ವಾಲ್ಮೀಕಿ ಸಮುದಾಯ ರಾಜ್ಯದಲ್ಲಿ ನಾಲ್ಕನೇ ಅತಿದೊಡ್ಡ ಸಮುದಾಯವಾಗಿದೆ. ಸುಮಾರು 50 ಲಕ್ಷ ಜನಸಂಖ್ಯೆ ಇರುವ ಈ ಸಮುದಾಯಕ್ಕೆ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಅಗತ್ಯವಿದೆ ಎಂದು ಆಗ್ರಹಿಸಿದರು.

ADVERTISEMENT

ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ರಚಿಸಿದ್ದ ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಇದರ ಬಗ್ಗೆ ಮಾತನಾಡಿ ನಂತರ ಕಡೆಗಣಿಸುತ್ತಿದ್ದಾರೆ.ರಾಜಕೀಯ ಪಕ್ಷಗಳು ವಾಲ್ಮೀಕಿ ಜನಾಂಗವನ್ನು ಕೇವಲ ಮತ ಬ್ಯಾಂಕ್‌ ಆಗಿ ಮಾತ್ರ ಮಾಡಿಕೊಂಡಿವೆ. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದರು.

ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳದೆ ಅನೇಕ ಅವಾಂತರಗಳಿಗೆ ಕಾರಣರಾಗುತ್ತಿದ್ದಾನೆ. ಮನಸ್ಸನ್ನು ನಿಗ್ರಹಿಸಿ ಸಂಸ್ಕಾರ ಹೊಂದಿ ಗುರುವಿನ ಮಾರ್ಗದರ್ಶನದಂತೆ ಸನ್ಮಾರ್ಗದಲ್ಲಿ ನಡೆದರೆ ಗುರಿ ತಲುಪಬಹುದು ಎಂದು ಹೇಳಿದರು.

ಆಧುನಿಕತೆಯ ಬೆನ್ನುಹತ್ತಿದ ಮನುಜ ಗಳಿಕೆಯತ್ತ ಗಮನಹರಿಸಿ ಶಾಂತಿ, ಪ್ರೀತಿ, ವಿಶ್ವಾಸ ಕಳೆದುಕೊಳ್ಳುತ್ತಿದ್ದಾನೆ. ದುಡಿಮೆಯ ಒಂದಂಶವನ್ನು ಧರ್ಮ ಕಾರ್ಯಕ್ಕೆ ನೀಡುವ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಶಿಡ್ಲೆಕೋಣ ವಾಲ್ಮೀಕಿ ಗುರುಪೀಠದ ಸಂಜಯ ಕುಮಾರ ಸ್ವಾಮೀಜಿ ಮಾತನಾಡಿ, ‘ತನ್ನ ಮುಗ್ಧ ತ್ಯಾಗ ಮನೋಭಾವನೆಯಿಂದ ಗಣ ಪದವಿ ಪಡೆದ ಕಣ್ಣಪ್ಪಸ್ವಾಮಿ ದೇಗುಲ ಹಾಗೂ ವಾಲ್ಮೀಕಿ ಮಹರ್ಷಿಯ ಪ್ರತಿಮೆ ಸ್ಥಾಪಿಸುವುದರ ಮೂಲಕ ಇಲ್ಲಿನ ಜನತೆ ಉತ್ತಮ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‌ಮನುಷ್ಯ ಜ್ಞಾನ ಮತ್ತು ಶ್ರದ್ಧೆಯಿಂದ ಉನ್ನತ ಸ್ಥಾನ ಅಲಂಕರಿಸಲು ಸಾಧ್ಯ. ಇಂತಹ ಜ್ಞಾನದಿಂದಲೇ ಮಹರ್ಷಿ ವಾಲ್ಮೀಕಿಯವರು ಇಡೀ ವಿಶ್ವವೇ ಮೆಚ್ಚುವಂತಹ ರಾಮಾಯಣ ಕೃತಿ ರಚಿಸಲು ಸಾಧ್ಯವಾಯಿತು. ಎಲ್ಲರೂ ಭಕ್ತಿ ಹಾಗೂ ಶ್ರದ್ಧೆ ರೂಢಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಕರೆ ನೀಡಿದರು.

ಶಾಸಕ ಎಸ್.ಆರ್. ಶ್ರೀನಿವಾಸ್ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಮಾಜಿ ಸದಸ್ಯರಾದ ಚಂದ್ರಶೇಖರ್ ಬಾಬು, ಬೇಡರ ಕಣ್ಣಪ್ಪ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರಮೂರ್ತಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷರಾದ ಜಯಾನಂದ, ಕೃಷ್ಣಮೂರ್ತಿ, ಕಾರ್ಯದರ್ಶಿ ರಾಮಚಂದ್ರಯ್ಯ, ಖಜಾಂಚಿ ಗಿರಿನಾಯಕ್, ನಿರ್ದೇಶಕ ರಾದ ತಾತನಾಯಕ, ಸಿದ್ದಗಂಗಯ್ಯ, ಕುಮಾರ್, ಅಮಿತಾ, ತಿಮ್ಮಯ್ಯ, ವಕೀಲರಾದ ಶಾಂತ, ಮುಖಂಡರಾದ ಅನುಸೂಯ, ರಾಮಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ್, ಸದಸ್ಯರಾದ ಸಂತೋಷ್, ನರಸಯ್ಯ, ಜಗದೀಶ್, ಹೇಮಂತ್, ಮಾಜಿ ಅಧ್ಯಕ್ಷ ಗಿರೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮಮತಾ, ಮುಖಂಡರಾದ ಎಸ್.ಡಿ. ದಿಲೀಪ್ ಕುಮಾರ್, ಎನ್.ಸಿ. ನಂಜಪ್ಪ, ಗಣೇಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.