ಕುಣಿಗಲ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದ ಮಗನನ್ನು (ಮನೋಜ್) ಕಳೆದುಕೊಂಡಿದ್ದ ತಾಲ್ಲೂಕಿನ ನಾಗಸಂದ್ರ ದೇವರಾಜು ಐದನೇ ದಿನಕ್ಕೆ ತಾಯಿಯನ್ನು ಕಳೆದುಕೊಂಡಿದ್ದಾರೆ.
ದೇವರಾಜು ಅವರ ತಾಯಿ ದೇವಿರಮ್ಮ (68) ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊಮ್ಮಗನ ಸಾವಿನಿಂದ ಇನ್ನಷ್ಟು ಆಘಾತಗೊಂಡಿದ್ದರು. ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಗುರುವಾರ ಮಗ ಮನೋಜ್ ಕುಮಾರ್ ಅಂತ್ಯಕ್ರಿಯೆ ಮುಗಿಸಿ, ಶನಿವಾರ ಹಾಲುತುಪ್ಪ ಎರೆದು, ಭಾನುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪರಿಹಾರ ಧನದ ಚೆಕ್ ಪಡೆದು ಬಂದಿದ್ದು, ಮುಂದಿನ ಕಾರ್ಯಗಳಿಗೆ ಅಣಿಯಾಗುವ ಮುನ್ನವೇ ತಾಯಿಯ ಅಂತ್ಯಕಾರ್ಯ ಮಾಡುವ ದುಃಸ್ಥಿತಿಗೆ ದೇವರಾಜು ಅವರಿಗೆ ಒದಗಿದೆ ಎಂದು ಗ್ರಾಮಸ್ಥರು ಮರುಗಿದ್ದಾರೆ.
ಮನೋಜ್ ಕುಮಾರ್ ಅಂತ್ಯಕ್ರಿಯೆ ನಂತರ ತಾಯಿ ಗೌರಮ್ಮ ಮಗನನ್ನು ಕಳೆದುಕೊಂಡ ದುಃಖದಿಂದ ಹೊರಬರಲಾಗದೆ ಅಸ್ವಸ್ಥರಾಗಿದ್ದಾರೆ. ತುರುವೇಕೆರೆಯಲ್ಲಿ ತಮ್ಮ ಸಹೋದರಿ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಅತ್ತೆ ದೇವಿರಮ್ಮ ಅವರ ಅಂತ್ಯಕ್ರಿಯೆಯಲ್ಲಿಯೂ ಭಾಗಿಯಾಗದ ಸ್ಥಿತಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.