ADVERTISEMENT

ಗ್ಯಾರೇಜ್, ಬಟ್ಟೆ, ಚಿನ್ನದ ಅಂಗಡಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 3:36 IST
Last Updated 13 ಜೂನ್ 2021, 3:36 IST

ತುಮಕೂರು: ವಾಹನ ದುರಸ್ತಿ ಮಾಡುವ ಗ್ಯಾರೇಜ್, ಜವಳಿ ಅಂಗಡಿ, ಚಿನ್ನ, ಬೆಳ್ಳಿ ಅಂಗಡಿಗಳನ್ನು ಜಿಲ್ಲೆಯಲ್ಲಿ ಸೋಮವಾರದಿಂದ ತೆರೆಯಬಹುದಾಗಿದೆ. ಮಧ್ಯಾಹ್ನ 2 ಗಂಟೆ ವರೆಗೆ ಮಾತ್ರ ತೆರೆದು ವಹಿವಾಟು ನಡೆಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ದಿನಸಿ, ಹಣ್ಣು, ತರಕಾರಿ ಇತರ ಅಗತ್ಯ ವಸ್ತುಗಳನ್ನು ಕೊಳ್ಳಲು ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಿದ್ದು, ಅದೇ ರೀತಿ ಈಗ ಹೊಸದಾಗಿ ಅವಕಾಶ ನೀಡಿರುವ ವಲಯದವರು ಮಳಿಗೆಗಳನ್ನು ತೆರೆಯಬಹುದಾಗಿದೆ. ಜಿಲ್ಲೆಯಲ್ಲಿ ಕೋವಿಡ್ ದೃಢ ಪ್ರಮಾಣ ಶೇ 7ರಿಂದ 8ಕ್ಕೆ ಇಳಿಕೆಯಾಗಿದೆ.

ಶನಿವಾರ ಶಾಸಕರ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲೂ ಲಾಕ್‌ಡೌನ್ ಸಡಿಲಗೊಳಿಸಿದ್ದು, ಸೇವಾ ವಲಯದ ಜತೆಗೆ ಕೆಲವು ವಲಯದ ವ್ಯಾಪಾರಕ್ಕೆ ಅವಕಾಶ ನೀಡಲು ಸಭೆ ನಿರ್ಣಯ ಕೈಗೊಂಡಿದೆ. ಮಧ್ಯಾಹ್ನ 2 ಗಂಟೆಯ ನಂತರ ವ್ಯಾಪಾರ ನಡೆಸುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಆದರೆ ಭಾನುವಾರ ಯಾರೊಬ್ಬರೂ ಅಂಗಡಿ ತೆರೆಯುವಂತಿಲ್ಲ. ಅಂದು ಇಡೀ ದಿನ ಸಂಪೂರ್ಣ ಮುಚ್ಚಿರಬೇಕು. ಆರು ದಿನಗಳು ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಹೊಸ ನಿಯಮ ಸೋಮವಾರದಿಂದ ಜಾರಿಗೆ ಬರಲಿದ್ದು, ಎಲ್ಲಿಯವರೆಗೂ ಇದು ಜಾರಿಯಲ್ಲಿ ಇರುತ್ತದೆ ಎಂದು ಈಗಲೇ
ನಿರ್ಧರಿಸಲು ಸಾಧ್ಯವಿಲ್ಲ. ಮುಂದಿನ ಆದೇಶದವರೆಗೆ ಈ ನಿಯಮ ಅನ್ವಯಿಸುತ್ತದೆ ಎಂದು
ವಿವರಿಸಿದರು.

ಶಕ್ತಿವಂತರು, ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಕೋವಿಡ್ ಲಸಿಕೆ ಖರೀದಿಸಿಕೊಟ್ಟರೆ ಉಚಿತವಾಗಿ ಹಾಕಿಸಿಕೊಡಲಾಗುವುದು. ಪ್ರಸ್ತುತ ಜಿಲ್ಲೆಗೆ ಪ್ರತಿ ದಿನ 20 ಸಾವಿರದಿಂದ 25 ಸಾವಿರ ಡೋನ್ ಲಸಿಕೆ ಬರುತ್ತಿದೆ. ಇದೇ ವೇಗದಲ್ಲಿ ನಡೆದರೆ ಜಿಲ್ಲೆಯ ಎಲ್ಲಾ ಜನರಿಗೆ ಲಸಿಕೆ ಹಾಕಲು ಐದಾರು ತಿಂಗಳು ಬೇಕಾಗುತ್ತದೆ. ಹಾಗಾಗಿ ಉದ್ಯಮದವರು ಖರೀದಿಸಿ ತಮ್ಮ ನೌಕರರಿಗೆ ಕೊಡಿಸಬಹುದಾಗಿದೆ ಎಂದು ಸಲಹೆ ಮಾಡಿದರು.

ಮೂರನೇ ಅಲೆ ತಡೆಯಲು ಸಜ್ಜಾಗುತ್ತಿದ್ದು, ಜಿಲ್ಲೆಯಲ್ಲಿ ಮಕ್ಕಳಿಗಾಗಿ 600 ಹಾಸಿಗೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 4 ಸಾವಿರ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಬುದ್ಧಿಮಾಂದ್ಯ ಒಂದು ಮಗು ಮಾತ್ರ ಸಾವನ್ನಪ್ಪಿದೆ.
ಅಪೌಷ್ಟಿಕ ಮಕ್ಕಳನ್ನು ಗುರುತಿಸಿದ್ದು, ಪೌಷ್ಟಿಕ ಆಹಾರ ನೀಡುವ ಮೂಲಕ ಮೂರನೇ ಅಲೆ ಬರುವ ವೇಳೆಗೆ ಮಕ್ಕಳನ್ನು ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.