ತುಮಕೂರು: ನಂದಿಹಳ್ಳಿ– ಮಲ್ಲಸಂದ್ರ– ವಸಂತನರಸಾಪುರ ಬೈಪಾಸ್ ರಸ್ತೆ (ನಾಲ್ಕು ಪಥ) ನಿರ್ಮಾಣ ವಿರೋಧಿಸಿ, ಅಧಿಸೂಚನೆ ವಾಪಸ್‌ಗೆ ಆಗ್ರಹಿಸಿ ಯೋಜನೆ ಪ್ರದೇಶದ 46 ಹಳ್ಳಿಗಳ ರೈತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಂದಿಹಳ್ಳಿ– ಮಲ್ಲಸಂದ್ರ– ವಸಂತನರಸಾಪುರ ಬೈಪಾಸ್ ರಸ್ತೆ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ನಗರದ ಟೌನ್‌ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ರಸ್ತೆ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಳ್ಳಬಾರದು. ಅನ್ನ ನೀಡುವ ರೈತರ ಬಾಯಿಗೆ ಮಣ್ಣು ಹಾಕಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೋಜನೆ ಕೈಬಿಡದಿದ್ದರೆ ಹೋರಾಟ ಮುಂದುವರಿಸಲು ನಿರ್ಧರಿಸಿದರು.
ನಿಯಮದಂತೆ ಗ್ರಾಮ ಸಭೆ ಕರೆದು ಒಪ್ಪಿಗೆ ಪಡೆದುಕೊಳ್ಳಬೇಕು. ಸಾಮಾಜಿಕ ಪರಿಣಾಮದ ಬಗ್ಗೆ ಅಧ್ಯಯನ ನಡೆಸಬೇಕು. ಈಗಾಗಲೇ ಇರುವ ರಿಂಗ್ ರಸ್ತೆ ಅಭಿವೃದ್ಧಿಪಡಿಸಬೇಕು. ನಗರದಲ್ಲಿ ವಾಹನ ದಟ್ಟಣೆ ತಗ್ಗಿಸಲು ಪರ್ಯಾಯ ವ್ಯವಸ್ಥೆಗಳ ಬಗ್ಗೆ ತಜ್ಞರು, ರೈತ ಸಂಘಟನೆಗಳ ಪ್ರಮುಖರು, ಚಿಂತಕರ ಜತೆಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ಬೈಪಾಸ್ ರಸ್ತೆ ನಿರ್ಮಾಣವಾದರೆ 46 ಹಳ್ಳಿಗಳ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಸಾವಿರಾರು ಸಂಖ್ಯೆಯ ಬಡ ರೈತರು ಫಲವತ್ತಾದ ತುಂಡು ಜಮೀನು, ಮನೆ ಕಳೆದುಕೊಳ್ಳುತ್ತಾರೆ. ನೂರಾರು ಎಕರೆಗಳಲ್ಲಿ ಬೆಳೆದಿರುವ ತೆಂಗು, ಅಡಿಕೆ, ಮಾವು, ಬಾಳೆ ತೋಟಗಳು, ಕುರಿ–ಮೇಕೆ ಸಾಕಣಿಕೆ ಘಟಕಗಳು, ತೆಂಗಿನಕಾಯಿ ಶೆಡ್‌ಗಳು ನಾಶವಾಗಲಿವೆ. ಸಿರಿಧಾನ್ಯ ಬೆಳೆಯುವ ಪ್ರದೇಶ ಮರೆಯಾಗಲಿದೆ. ಈ ಭಾಗದ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದು, ಜಮೀನು ಕಳೆದುಕೊಂಡು ಪರ್ಯಾಯವಾಗಿ ಬದುಕು ಕಟ್ಟಿಕೊಳ್ಳಲಾಗದೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಸಿಗುವ ಪರಿಹಾರದ ಪುಡಿಗಾಸಿನಲ್ಲಿ ಒಂದು ನಿವೇಶನ ಕೊಳ್ಳಲು ಸಾಧ್ಯವಿಲ್ಲ. ಒಮ್ಮೆ ತೋಟ ಕಳೆದುಕೊಂಡರೆ ರೈತರ ಬದುಕು ನಾಶವಾಗಲಿದೆ. ಹಸಿರಿನಿಂದ ಕಂಗೊಳಿಸುತ್ತಿರುವ ತುಮಕೂರಿನ ಹೊರವಲಯ ಕಾಂಕ್ರೀಟ್ ಕಾಡಾಗಲಿದೆ. ಬೈಪಾಸ್ ರಸ್ತೆ ಸುತ್ತಮುತ್ತಲಿನ ಜಮೀನು ವಾಣಿಜ್ಯ ಉದ್ದೇಶ, ಕಟ್ಟಡಗಳಿಗೆ ಬಲಿಯಾಗಲಿದೆ. ಬೈಪಾಸ್ ರಸ್ತೆಯ ವಾಸನೆ ಹಿಡಿದ ರಿಯಲ್ ಎಸ್ಟೇಟ್ ದಲ್ಲಾಳಿಗಳು ಈಗಾಗಲೇ ಜಮೀನು ಖರೀದಿಸಿ, ನಿವೇಶನ ನಿರ್ಮಾಣ, ವಾಣಿಜ್ಯ ಮಳಿಗೆ ಕಟ್ಟುವ ದಂಧೆ ಆರಂಭಿಸಿದ್ದಾರೆ. ಇದರ ಮಧ್ಯೆ ಸಂತ್ರಸ್ತರು ಬದುಕಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕೋಟ್ಯಂತರ ಖರ್ಚುಮಾಡಿ ನಿರ್ಮಿಸಿರುವ ಕ್ಯಾತ್ಸಂದ್ರ, ಗೆದ್ದಲಹಳ್ಳಿ ರಿಂಗ್ ರಸ್ತೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಿದೆ. ಬಟವಾಡಿ– ಮಲ್ಲಸಂದ್ರ ವರೆಗೆ ಬಿ.ಎಚ್.ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸುವ ಪ್ರಸ್ತಾಪವಿದ್ದು, ಆಗ ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಈ ಯೋಜನೆಗೂ ರೈತರು ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ರಾಮನಗರ, ಹೆಬ್ಬೂರು, ನೊಣವಿನಕೆರೆ ಮಧ್ಯೆ ನಾಲ್ಕು ಪಥದ ರಸ್ತೆಯ ನಿರ್ಮಾಣಕ್ಕೂ ಯೋಜಿಸಲಾಗಿದೆ. ಇದರಿಂದಲೂ ರೈತರು ಜಮೀನು ಕಳೆದುಕೊಳ್ಳಬೇಕಿದೆ. ಕೊನೆಗೆ ರೈತರ ಬಳಿ ಜಮೀನು ಎಲ್ಲಿ ಉಳಿಯುತ್ತದೆ ಎಂದು ಕೇಳಿದರು.
ಮಾಜಿ ಶಾಸಕ ಎಚ್.ನಿಂಗಪ್ಪ, ಹೋರಾಟ ಸಮಿತಿ ಮುಖಂಡರಾದ ಎ.ಗೋವಿಂದರಾಜು, ಯಶವಂತ್, ಎಸ್.ಎನ್.ಸ್ವಾಮಿ, ಕಂಬೇಗೌಡ, ಬಿ.ಉಮೇಶ್, ಜಿ.ಸಿ.ಶಂಕರಪ್ಪ, ಅಜ್ಜಪ್ಪ, ರಮೇಶ್ ಭೈರಸಂದ್ರ, ಸಿದ್ದಗಂಗಯ್ಯ, ನಿಂಗರಾಜು, ಉದಯ್ ಕುಮಾರ್, ಮೋಹನ್ ಕುಮಾರ್ ಸೈಯದ್ ಮುಜೀಬ್, ಗಿರೀಶ್, ಚಿರತೆಚಿಕ್ಕಣ್ಣ, ಹಾರೋಹಳ್ಳಿ ಮಂಜುನಾಥ್, ಶ್ರೀನಿವಾಸ್, ಕೆ.ಎಂ.ವೆಂಕಟೇಗೌಡ, ಲಕ್ಷ್ಮಣಗೌಡ, ರಂಗಹನುಮಯ್ಯ, ಆರ್.ಎಸ್.ಚನ್ನಬಸವಣ್ಣ, ದೊಡ್ಡನಂಜಪ್ಪ, ಷಬ್ಬೀರ್ ಅಹಮದ್, ರಂಗಧಾಮಯ್ಯ ಇತರರು ಭಾಗವಹಿಸಿದ್ದರು.
ದೇವನಹಳ್ಳಿ ಮಾದರಿ ಹೋರಾಟ
ರೈತರನ್ನು ಕತ್ತಲಿನಲ್ಲಿಟ್ಟು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದು ಮತ್ತೊಂದು ದೇವನಹಳ್ಳಿ ಹೋರಾಟವಾಗಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಸಿದರು. ಅನುಮತಿ ಇಲ್ಲದೆ ಅಧಿಕಾರಿಗಳು ಭೂಮಿ ಅಳತೆಗೆ ಬಂದರೆ ಹೆಣ್ಣು ಮಕ್ಕಳು ಪೊರಕೆ ಗಂಡು ಮಕ್ಕಳು ಚಾವಟಿ ಹಿಡಿದು ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.