ADVERTISEMENT

ಆನ್‌ಲೈನ್ ಶಿಕ್ಷಣದ ವೈಭವೀಕರಣಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 16:21 IST
Last Updated 20 ಜೂನ್ 2021, 16:21 IST

ತುಮಕೂರು: ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಆನ್‌ಲೈನ್ ಶಿಕ್ಷಣವನ್ನುಕ್ರಾಂತಿ ಕಾರಕ ಬದಲಾವಣೆ ಎಂದು ವೈಭವೀಕರಿಸಿ ಸ್ವಾಗತಿಸಿರುವುದನ್ನು ಜಿಲ್ಲಾ ಜನಸಂಗ್ರಾಮ ಪರಿಷತ್ ಅಧ್ಯಕ್ಷ ಪಂಡಿತ್ ಜವಾಹರ್ ವಿರೋಧಿಸಿದ್ದಾರೆ.

ಮೂರು, ನಾಲ್ಕು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯಾಗಲಿದ್ದು, ಆನ್‌ಲೈನ್ ಶಿಕ್ಷಣಕ್ಕೆ ಹೊರಳಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಕೊರೊನಾ ವೈರಸ್ ಪರಿಣಾಮದಿಂದ ಆ ದಿನಗಳನ್ನು ಬೇಗನೆ ನೋಡುತ್ತಿದ್ದೇವೆ ಎನ್ನುವ ಮೂಲಕ ಕೊರೊನಾ ವೈರಸ್‌ಗೆ ಧನ್ಯವಾದ ತಿಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದೇಗೌಡ ಅವರನ್ನು ಪ್ರಬುದ್ಧರು, ಬುದ್ಧಿವಂತರು ಎಂದು ತಿಳಿದಿದ್ದೆವು. ಈ ರೀತಿಯ ಹೇಳಿಕೆ ತುಂಬಾ ನಿರಾಸೆ ತಂದಿದೆ. ನಿಜಕ್ಕೂ ಆನ್‌ಲೈನ್ ಶಿಕ್ಷಣ ಒಳ್ಳೆಯದೆ? ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಶಿಕ್ಷಣ ಜಾರಿಯಾದರೆ ಈಗಿರುವ ಶಿಕ್ಷಕರು ಮತ್ತು ಅವರ ಕುಟುಂಬದವರು ನಿರುದ್ಯೋಗಿಗಳು ಆಗುವುದಿಲ್ಲವೆ? ಆನ್‌ಲೈನ್ ಶಿಕ್ಷಣದಲ್ಲಿ ಒಬ್ಬ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳಿಗೆ ಒಂದೇ ಸಮಯದಲ್ಲಿ ಶಿಕ್ಷಣ ಕೊಡುವಂತಾದರೆ ಈಗ ಇರುವ ಲಕ್ಷಾಂತರ ಶಿಕ್ಷಕರಿಗೆ ಏನು ಕೆಲಸ? ಇರುವ ಶಾಲಾ ಕಟ್ಟಡಗಳನ್ನು ಉಗ್ರಾಣಗಳನ್ನಾಗಿ ಮಾಡಬೇಕೆ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮೊಬೈಲ್, ಟ್ಯಾಬ್, ಕಂಪ್ಯೂಟರ್‌
ಗಳನ್ನು ನಿರಂತರವಾಗಿ ನೋಡುವು
ದರಿಂದ ಕಣ್ಣು, ಮೆದುಳು, ಮನಸ್ಸಿನ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ. ಆನ್‌ಲೈನ್ ಶಿಕ್ಷಣದಿಂದ ಪ್ರತಿ ವಿದ್ಯಾರ್ಥಿ ದಿನಕ್ಕೆ ಆರೇಳು ಗಂಟೆಗಳವರೆಗೆ ಕಂಪ್ಯೂಟರ್ ಮುಂದೆ ಕೂರಬೇಕಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದೆ? ಆನ್‌ಲೈನ್ ಶಿಕ್ಷಣದಿಂದ ಮಕ್ಕಳು ಮೊಬೈಲ್, ಕಂಪ್ಯೂಟರ್‌ ಎಂಬ ನಿರ್ಜೀವ ವಸ್ತುಗಳ ಜೊತೆ ಬದುಕುವುದನ್ನು ಕಲಿತು ಬಿಡುತ್ತಾರೆ. ಇದು ಬಹುತ್ವ ಸಂಸ್ಕೃತಿಯ ನಾಶಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಶಿಕ್ಷಕರು, ಶಿಕ್ಷಣ ರಂಗದ ತಜ್ಞರು ಆನ್‌ಲೈನ್ ಶಿಕ್ಷಣದ ಅಪಾಯಗಳನ್ನು ಸರ್ಕಾರದ ಗಮನಕ್ಕೆ ತರಬೇಕೆ ಹೊರತು ಸರ್ಕಾರದ ತುತ್ತೂರಿ ಆಗಬಾರದು ಎಂಬುದು ಸಮಾಜದ ಬಹುಜನರ ಆಶಯ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.