ADVERTISEMENT

ಪರಿಶಿಷ್ಟರ ಅನುದಾನ ಕಡಿತಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 3:01 IST
Last Updated 11 ಮಾರ್ಚ್ 2021, 3:01 IST
ತುಮಕೂರು ಹೊರ ವಲಯದ ಗೂಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದರು
ತುಮಕೂರು ಹೊರ ವಲಯದ ಗೂಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟಿಸಿದರು   

ತುಮಕೂರು: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿಗೆ ನೀಡುವ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಪರಿಶಿಷ್ಟ ಜಾತಿ ಹಾಗೂಪಂಗಡದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ನಗರದ ಹೊರ ವಲಯದ ಗೂಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ದಲಿತರ ಅಭಿವೃದ್ಧಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟರ ಹಣಕ್ಕೆ ಕತ್ತರಿ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಸೇರಿದಂತೆ ಪರಿಶಿಷ್ಟರ ಅಭಿವೃದ್ಧಿಗೆ ಭರಪೂರ ಭರವಸೆಗಳನ್ನು ನೀಡಿದ್ದ ಬಿಜೆಪಿ, ಈಗ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮುಂದುವರೆದ ಜಾತಿಗಳಿಗೆ ಒಂದು ಸಾವಿರ ಕೋಟಿ ಅನುದಾನ ನೀಡಿ, ಪರಿಶಿಷ್ಟರು, ಹಿಂದುಳಿದ,ಅಲ್ಪಸಂಖ್ಯಾತ ವರ್ಗಗಳಿಗೆ ಕೇವಲ ₹500 ಕೋಟಿ ನೀಡುವ ಮೂಲಕ ಅನ್ಯಾಯವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ಶಾಸಕರು ಅನುದಾನ ಕಡಿತಗೊಳಿಸಿದರೂ ಚಕಾರವೆತ್ತದೆ ಮೌನವಹಿಸಿದ್ದಾರೆ. ತಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸಲು ಆಗದಿದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಜನರ ಕಲ್ಯಾಣಕ್ಕಾಗಿ ಮಂಡಿಸುವ ಬಜೆಟ್‍ನಲ್ಲಿ ಸಾಮಾಜಿಕ ನ್ಯಾಯ ಕಾಪಾಡಲು ವಿಫಲವಾಗಿದ್ದು, ಅಹಿಂದ ವರ್ಗಗಳಿಗೆ ನೇಣು ಹಾಕುವಂತೆ ಯಡಿಯೂರಪ್ಪ ಆಡಳಿತ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಬೆಳಗುಂಬ ವೆಂಕಟೇಶ್, ಹೆತ್ತೇನಹಳ್ಳಿ ಮಂಜುನಾಥ್, ನರುಗನಹಳ್ಳಿ ವಿಜಯಕುಮಾರ್, ಜಹೀರ್ ಅಬ್ಬಾಸ್, ಕೃಷ್ಣೇಗೌಡ, ಕೆಂಪಹನುಮಣ್ಣ, ಕರೆರಂಗಪ್ಪ, ಚಲುವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.