ADVERTISEMENT

ಯಾರ ಕೈ ಮೇಲೂ ಅಲ್ಲ, ಕೆಳಗೂ ಅಲ್ಲ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 15:20 IST
Last Updated 24 ಡಿಸೆಂಬರ್ 2018, 15:20 IST
ಪರಮೇಶ್ವರ
ಪರಮೇಶ್ವರ   

ತುಮಕೂರು: ‘ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರ ಕೈ ಮೇಲೂ ಆಗಿಲ್ಲ ಕೆಳಗೂ ಆಗಿಲ್ಲ. ವಿಸ್ತರಣೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

‘ಯಾರಿಗೆ ಸಚಿವ ಸ್ಥಾನ ನೀಡಬೇಕು, ಏಕೆ ನೀಡಬೇಕು ಎನ್ನುವುದು ವರಿಷ್ಠರ ನಿರ್ಧಾರ. ಅವರಿಗೆ ನಾವು ಸಲಹೆಗಳನ್ನು ನೀಡಬಹುದಷ್ಟೇ. ಅಂತಿಮ ತೀರ್ಮಾನ ಅವರದ್ದೇ ಆಗಿರುತ್ತದೆ’ ಎಂದು ನುಡಿದರು.

ADVERTISEMENT

‘ಶಾಸಕ ರಾಮಲಿಂಗಾರೆಡ್ಡಿ ಅವರಿಗೆ ನಾನು ಮತ್ತು ದಿನೇಶ್ ಗುಂಡೂರಾವ್ ಸಚಿವ ಸ್ಥಾನ ತ‍ಪ್ಪಿಸಿದ್ದೇವೆ ಎಂದು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದೆ. ಇದು ಸತ್ಯಕ್ಕೆ ದೂರವಾದುದು. ರಮೇಶ್ ಜಾರಕಿಹೊಳಿ ಅವರ ವಿಚಾರದಲ್ಲಿ ಮಾಧ್ಯಮದವರು ಅನಗತ್ಯ ಗೊಂದಲ ಮೂಡಿಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನಂತರ ಸ್ವಾಭಾವಿಕವಾಗಿ ಅಸಮಾಧಾನ ಉಂಟಾಗುತ್ತದೆ. ಮುಂದಿನ ಒಂದು ವಾರದಲ್ಲಿ ಎಲ್ಲವೂ ತಿಳಿಯಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಸಚಿವ ಸ್ಥಾನ ದೊರೆಯದಿದ್ದಕ್ಕೆ ಕೆಲವು ಶಾಸಕರು ಬಂಡೇಳುವರು ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅಂತಹ ಶಾಸಕರ ಜೊತೆ ನಾನು ಮಾತನಾಡಿದ್ದೇನೆ. ನಾವು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ’ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ ಎನ್ನುವ ಪ್ರಶ್ನೆಗೆ, ‘ಅದು ನನಗೆ ಗೊತ್ತಿಲ್ಲ. ಇತ್ತೀಚೆಗೆ ದೆಹಲಿಯಲ್ಲಿ ಅವರನ್ನು ನಾನು ಭೇಟಿ ಮಾಡಿದ್ದೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.