ADVERTISEMENT

ತಿಪಟೂರು | ಉದ್ಯಾನ ಅದ್ವಾನ: ವಿಹಾರಿಗಳು ಹೈರಾಣ

₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ: ಎರಡೇ ವರ್ಷದಲ್ಲಿ ಸೌಂದರ್ಯ ಕಳೆದುಕೊಂಡ ಪಾರ್ಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 5:13 IST
Last Updated 16 ಸೆಪ್ಟೆಂಬರ್ 2024, 5:13 IST
ತಿಪಟೂರಿನ ಅಮಾನಿಕೆರೆಯಲ್ಲಿರುವ ಉದ್ಯಾನದಲ್ಲಿ ಮದ್ಯದ ಬಾಟಲಿಗಳ ರಾಶಿ
ತಿಪಟೂರಿನ ಅಮಾನಿಕೆರೆಯಲ್ಲಿರುವ ಉದ್ಯಾನದಲ್ಲಿ ಮದ್ಯದ ಬಾಟಲಿಗಳ ರಾಶಿ   

ತಿಪಟೂರು: ಸಾರ್ವಜನಿಕರ ವಾಯು ವಿಹಾರಕ್ಕೆ, ಮಕ್ಕಳ ಆಟಕ್ಕೆ, ವೃದ್ಧರ ವಿಶ್ರಾಂತಿಗೆ ಉಪಯೋಗವಾಗಬೇಕಿದ್ದ ನಗರದ ಅಮಾನಿಕೆರೆಯಲ್ಲಿರುವ ಉದ್ಯಾನ ಕುಡುಕರ ಅಡ್ಡವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ನಗರದಲ್ಲಿರುವ 111 ಎಕರೆಯ ಅಮಾನಿಕೆರೆ ಪ್ರಾಂಗಣದಲ್ಲಿ 3ರಿಂದ 4 ಎಕರೆ ವ್ಯಾಪ್ತಿಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಎರಡು ವರ್ಷಗಳ ಅಂತರದಲ್ಲಿಯೇ ಉದ್ಯಾನದ ಸೌಂದರ್ಯ ನಶಿಸಿದೆ.

ಅಮಾನಿಕೆರೆಯಲ್ಲಿರುವ ಪಾರ್ಕ್ ನಗರದ ಮಧ್ಯಭಾಗದಲ್ಲಿದ್ದು, ಎಂಟು ವಾರ್ಡ್‌ಗಳಿಗೆ ಸಂಪರ್ಕ ಹೊಂದಿದೆ. ಇಲ್ಲಿನ ಸುತ್ತಮುತ್ತ ಯಾವುದೇ ಮತ್ತೊಂದು ಪಾರ್ಕ್‌ ಇಲ್ಲದಿರುವುದರಿಂದ ಸಾಕಷ್ಟು ಜನರು ವಾಕಿಂಗ್‌ಗೆ ಬರುತ್ತಾರೆ. ಉದ್ಯಾನದ ಮುಂಬಾಗದಲ್ಲಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರ ಪ್ರಾಂಗಣವಿದ್ದು, ರೈತರು ತರಕಾರಿ ಹರಾಜಿಗೆ ಕೊಟ್ಟ ನಂತರ ಹಣ ಪಡೆಯುವವರೆಗೆ ಪಾರ್ಕ್‌ಗೆ ಬಂದು ಹೊಗುತ್ತಾರೆ. ಮತ್ತೊಂದೆಡೆ ಎಆರ್‌ಟಿಒ ಕಚೇರಿ ಸಹ ಇದ್ದು, ಸಾರ್ವಜನಿಕರು ಪ್ರತಿನಿತ್ಯ ಕಚೇರಿಗೆ ಬಂದು ಕೆಲಸ ವಿಳಂಬವಾದಾಗ ವಿಶ್ರಾಂತಿಗಾಗಿ ಈ ಪಾರ್ಕ್‌ ಅನ್ನು ಅವಲಂಬಿಸುತ್ತಾರೆ.

ADVERTISEMENT

ಪ್ರತಿನಿತ್ಯ ಈ ಉದ್ಯಾನದಲ್ಲಿ ಬೆಳಿಗ್ಗೆ ಹಾಗೂ ಸಂಜೆ ನೂರಾರು ಸಾರ್ವಜನಿಕರು, ಮಹಿಳೆಯರು, ವೃದ್ಧರು, ಮಕ್ಕಳು, ವ್ಯಾಯಾಮ, ವಾಯುವಿಹಾರ ಹಾಗೂ ಯೋಗಾಸನಕ್ಕೆ ಬರುತ್ತಾರೆ. ಆದರೆ ಈ ಉದ್ಯಾನದಲ್ಲಿ ನಿರ್ಮಾಣವಾಗಿರುವ ನಡಿಗೆ ಪಥದಲ್ಲಿ ಹುಲ್ಲು, ಗಿಡ ಗಂಟಿ, ಮುಳ್ಳಿನ ಗಿಡಗಳು ಬೆಳೆದು ಜನರು ನೆಡೆದಾಡುವಾಗ ಕಾಲಿಗೆ ಸುತ್ತಿಕೊಂಡು ಬೀಳುವ ಸಾಧ್ಯತೆಯೂ ಇದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕೆರೆಗೆ ನಿರ್ಮಿಸಿರುವ ತಂತಿಬೇಲಿ ಅಲ್ಲಲ್ಲಿಯೇ ತುಂಡಾಗಿದ್ದು, ಪ್ರಾಣಿಗಳು ನುಸುಳುವ ಜಾಗವಾಗಿದೆ.

ವಾಕಿಂಗ್ ಪಥದಲ್ಲಿ ವಿದ್ಯುತ್ ದೀಪಗಳು ಕೆಟ್ಟ ಹೋಗಿದ್ದು, ಭದ್ರತಾ ಕೊಠಡಿ ಒಳಗಡೆಯಿರುವ ಪೀಠೋಪಕರಣಗಳಿಗೆ ಭದ್ರತೆ ಇಲ್ಲದೆ, ನೀರಿನ ಸಂಪರ್ಕವಿಲ್ಲದೆ ಶೌಚಾಲಯದ ಸುತ್ತ ಗಿಡಗಂಟಿಗಳು ಮುತ್ತಿಗೆ ಹಾಕಿವೆ.

ಮಕ್ಕಳಿಗೆ ಆಳವಡಿಸಿರುವ ಆಟಿಕೆಗಳು ಮುರಿದಿದ್ದು, ಅದರಲ್ಲಿಯೇ ಮಕ್ಕಳು ಆಟವಾಡುವಾಗ ಕಬ್ಬಿಣ ಸಲಾಕೆಗಳು ದೇಹಕ್ಕೆ ಬಡಿದು ರಕ್ತ ಸ್ರಾವವಾದ ನಿದರ್ಶಗಳೂ ಇವೆ.

ಉದ್ಯಾನದಲ್ಲಿ ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗಿ ಪಾರ್ಕ್‌ನಲ್ಲಿ ಕುಳಿತು ಕಾಲಾಹರಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಾರ್ಕ್ ಪಕ್ಕದಲ್ಲಿರುವ ಮದ್ಯದಂಗಡಿಯಿಂದ ಕುಡುಕರು ಮದ್ಯದ ಬಾಟಲ್‌ಗಳನ್ನು ತಂದು ಕುಡಿದು, ಅಲ್ಲಿಯೇ ಎಸೆಯುತ್ತಿರುವುದರಿಂದ ಮರಗಳ ಸುತ್ತ ತ್ಯಾಜ್ಯ ರಾಶಿಯೇ ನಿರ್ಮಾಣವಾಗಿದೆ. ಬಾಟಲಿಗಳನ್ನು ಒಡೆದ ಪರಿಣಾಮ ಗಾಜಿನ ಚೂರುಗಳು ಅಲ್ಲಿಲ್ಲಿಯೇ ಬಿದ್ದಿದೆ.

ಉದ್ಘಾಟನೆಗೊಂಡು ಎರಡು ವರ್ಷ ಸಮೀಪಿಸುತ್ತಿದ್ದರೂ ಭದ್ರತಾ ಸಿಬ್ಬಂದಿ ಇಲ್ಲ. ಯಾವ ಇಲಾಖೆ ಸಹ ನಿರ್ವಹಣೆ ಮಾಡದೆ ನಿರ್ಲಕ್ಷ್ಯವಹಿಸಿದ್ದು, ಅವ್ಯವಸ್ಥೆಗೆ ಕಾರಣವಾಗಿದೆ. ಸಣ್ಣ ನೀರಾವರಿ ಇಲಾಖೆ, ನಗರಸಭೆ, ಕೆಆರ್‌ಐಡಿಎಲ್ ಸಂಸ್ಥೆ ಜೊತೆಗೆ ಪೊಲೀಸ್‌ ಇಲಾಖೆ ಕೈಜೋಡಿಸಿ, ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ತನ್ನ ಜವಾಬ್ದಾರಿ ಅರಿತು ಉದ್ಯಾನವನ ನಿರ್ವಹಿಸಬೇಕು ಎನ್ನುವುದು ಜನರ ಒತ್ತಾಯ.

ಈ ಪಾರ್ಕ್‌ನಲ್ಲಿ ಹಲವು ವರ್ಷಗಳಿಂದ ವಾಕಿಂಗ್ ಮಾಡುತ್ತಿದ್ದೇನೆ. ಇಲ್ಲಿ ನಮಗಿಂತ ಎತ್ತರವಾಗಿ ಗಿಡ ಗಂಟಿ ಬೆಳೆದಿವೆ. ಅಪರಿಚಿತರು ಎದುರಿಗೆ ಬಂದಾಗ ಭಯವಾಗುತ್ತದೆ. ವಾಕ್ ಮಾಡುವ ಜಾಗದಲ್ಲಿಯೇ ಮಲ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಕಳ್ಳರ ಕಾಟ ಹೆಚ್ಚಾಗಿದೆ
ಕಮಲ ಗೋಕುಲ್ ವಾಯು ವಿಹಾರಿ
ವೃದ್ಧರು ಹಾಗೂ ಮಹಿಳೆಯರು ವಾಯು ವಿಹಾರ ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳಲು ಆಸನಗಳು ಬೇಕಿದೆ. ಪಾರ್ಕ್‌ನಲ್ಲಿರುವ ಕುರ್ಚಿಗಳು ಮುಳ್ಳಿನ ಗಿಡಗಳಿಂದ ಮುಚ್ಚಿದ್ದು ಮುರಿದು ಹೋಗಿವೆ. ಪಾರ್ಕ್‌ಗೆ ಮೂಲ ಸೌಕರ್ಯ ಒದಗಿಸಬೇಕಿದೆ.
ಗಂಗಾಧರ್ ಜೆಮ್ಸ್ ಪೌಂಡೇಷನ್ ಕಾರ್ಯದರ್ಶಿ
ಕೆಆರ್‌ಐಡಿಎಲ್ ಸಂಸ್ಥೆಯವರು ಪಾರ್ಕ್ ನಿರ್ಮಿಸಿದ್ದು ಇನ್ನೂ ನಮ್ಮ ಇಲಾಖೆಗೆ ಹಸ್ತಾಂತರಿಸಿಲ್ಲ. ಆದರೂ ಸಾರ್ವಜನಿಕರ ಅಹವಾಲಿನ ಮೇರೆಗೆ ಗಿಡ ಗಂಟಿಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ
ದೊಡ್ಡಯ್ಯ ಸಣ್ಣ ನೀರಾವರಿ ಇಲಾಖೆ
ಪಾರ್ಕ್ ಸಣ್ಣ ನೀರಾವರಿ ಇಲಾಖೆ ಅಧೀನದಲ್ಲಿದ್ದು ಇಲಾಖೆ ಜೊತೆ ನಗರಸಭೆಯಿಂದ ಸ್ವಚ್ಛತೆ ಹಾಗೂ ರಕ್ಷಣೆಯ ಬಗ್ಗೆ ಪತ್ರ ವ್ಯವಹಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾರ್ಕ್ ಅಭಿವೃದ್ಧಿಗೆ ಇಲಾಖೆ ಸದಸ್ಯರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ವಿಶ್ವೇಶ್ವರಯ್ಯ ಬದರಗಡೆ ಪೌರಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.